ಬಾಗಲಕೋಟೆಯಲ್ಲಿ ಯೋಗಥಾನ್: 15 ಸಾವಿರ ವಿದ್ಯಾರ್ಥಿಗಳು ಭಾಗಿ - ಡ್ರೋನ್ ಕ್ಯಾಮರಾದಲ್ಲಿ ಸೆರೆ ಬಾಗಲಕೋಟೆ: ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಕ್ರೀಡಾಂಗಣದಲ್ಲಿ ವಿಶ್ವ ದಾಖಲೆಗಾಗಿ ಯೋಗಥಾನ್ ಕಾರ್ಯಕ್ರಮ ಜರುಗಿತು. ಏಕಕಾಲಕ್ಕೆ ಸುಮಾರು 15 ಸಾವಿರ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಯೋಗಾಭ್ಯಾಸ ಮಾಡಿದರು. ಬೆಳಿಗ್ಗೆಯಿಂದಲೇ ಚಳಿಯ ಮಧ್ಯೆ ಕುಳಿತು ವಿದ್ಯಾರ್ಥಿಗಳು ಯೋಗಥಾನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯೋಗಾಭ್ಯಾಸ ಮಾಡಿದರು.
ಯುವಜನರಿಗೆ ಯೋಗದ ಬಗ್ಗೆ ಜಾಗೃತಿ: ಯೋಗಥಾನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ಪಿ ಸಿ ಗದ್ದಿಗೌಡರ, ಇಂದಿನ ಯುವಕರಿಗೆ ಯೋಗದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ. ದುಶ್ಚಟಗಳಿಗೆ ದಾಸರಾಗುತ್ತಿರುವ ಇಂದಿನ ಯುವಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಯೋಗದಿಂದ ಆರೋಗ್ಯಕರ ಬೆಳವಣಿಗೆ ಆಗಲಿದೆ. ಮುಂದಿನ ದಿನಮಾನಗಳಲ್ಲಿ ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ಪತ್ರಿ ನಿತ್ಯ ಯೋಗಾಭ್ಯಾಸ ಮಾಡಿಕೊಳ್ಳುವ ಮೂಲಕ ಆರೋಗ್ಯ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಗಿನ್ನಿಸ್ ದಾಖಲೆಗೆ ಮಾತ್ರ ಯೋಗ ಸೀಮಿತವಾಗಬಾರದು :ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಗಿನ್ನಿಸ್ ದಾಖಲೆಗಾಗಿ ಮಾತ್ರ ಯೋಗ ಮಾಡುವುದು ಸೀಮಿತವಾಗಬಾರದು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೂನ್ 21ರಂದು ಯೋಗ ದಿನಾಚರಣೆ ಎಂದು ಆಚರಣೆ ಮಾಡಿ ಇಡೀ ವಿಶ್ವಕ್ಕೆ ಯೋಗದ ಮಹತ್ವ ತಿಳಿಸಿ ಕೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರತಿ ನಿತ್ಯ ಯೋಗದ ಮಾಡಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸುನೀಲಕುಮಾರ, ಜಿಪಂ ಸಿಇಓ ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಎನ್.ಐ.ಸಿಯ ಗಿರಿಯಾಚಾರ, ಜಿಲ್ಲಾ ಆಯುಷ್ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬೆಳಗಿನ ಜಾವ 6 ಗಂಟೆಯಿಂದಲೇ ವಿವಿಧ ಪ್ರದೇಶಗಳಿಂದ ವಿದ್ಯಾರ್ಥಿಗಳು ಆಗಮಿಸಿ, ಇಡೀ ಮೈದಾನಕ್ಕೆ ಯೋಗಥಾನ್ ಕಲರವ ಮೂಡಿಸಿದರು.
ಬೆಂಗಳೂರಲ್ಲಿ ಯೋಗಥಾನ್ಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ: ಇಂದು ರಾಜ್ಯಾದ್ಯಂತ ಯೋಗಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ವದ ಅತಿದೊಡ್ಡ ಯೋಗಥಾನ್ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಳಿಕ ಕನ್ನಡದಲ್ಲಿ ಶುಭಾಶಯ ಕೋರಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, 'ಯೋಗವು ಭಾರತೀಯ ಸಂಸ್ಕೃತಿ. ನಮ್ಮ ಸಂಸ್ಕ್ರತಿ ರಕ್ಷಿಸುವ ಕೆಲಸವನ್ನು ನಾವು ಮಾಡಬೇಕು. ಯೋಗ ಒಂದು ಕೇವಲ ವ್ಯಾಯಾಮವಲ್ಲ. ಇದು ಪರಿಸರದೊಂದಿಗೆ ಬೆರೆತು ನಡೆಸುವ ಪ್ರಕ್ರಿಯೆ. ಕರ್ನಾಟಕ ಸರ್ಕಾರವು ಯೋಗ ತರಬೇತಿ ಶಾಲೆಗಳನ್ನು ತೆರೆಯಲು ಮತ್ತು ಯೋಗಕ್ಕೆ ಉತ್ತೇಜನ ನೀಡಲು ಸಾಕಷ್ಟು ಕೆಲಸ ಮಾಡುತ್ತಿದೆ ಎಂದರು.
ಯುವಜನರು ನಮ್ಮ ಸಂಸ್ಕೃತಿಗಳನ್ನು ಅಳವಡಿಕೊಳ್ಳಬೇಕು. ಯೋಗ, ವ್ಯಾಯಾಮದಂತಹ ಚಟುವಟಿಕೆಗಳನ್ನು ಮಾಡಬೇಕು. ಇಂದಿನ ಕಾರ್ಯಕ್ರಮದ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಲು ಮುಂದಾಗಿರುವ ಎಲ್ಲರಿಗೂ ಶುಭಾಶಯ'ಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ರೇಷ್ಮೆ ಇಲಾಖೆ ಸಚಿವ ನಾರಾಯಣ ಗೌಡ, ಬೆಂಗಳೂರು ನಗರ ಜಿಲ್ಲಾ ಡಿಸಿ ದಯಾನಂದ್ ಭಾಗಿಯಾಗಿದ್ದರು.
ಇದನ್ನೂ ಓದಿ :ರಾಜ್ಯದೆಲ್ಲೆಡೆ ವಿಶ್ವ ದಾಖಲೆಯ ಯೋಗಥಾನ್: ಬೆಂಗಳೂರಿನಲ್ಲಿ ರಾಜ್ಯಪಾಲ ಗೆಹ್ಲೋಟ್ ಚಾಲನೆ