ಬಾಗಲಕೋಟೆ:ರಬಕವಿ-ಬನಹಟ್ಟಿ ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಅಗತ್ಯ ಸೌಕರ್ಯಗಳಿಲ್ಲದೆ ಅನಾರೋಗ್ಯದಿಂದ ಬಳಲುತ್ತಿದೆ. ಹೀಗಾಗಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಆಗಲಾದರೂ ಸರ್ಕಾರದಿಂದ ಸೂಕ್ತ ಸೌಲಭ್ಯಗಳನ್ನು ಪಡೆಯುವಲ್ಲಿ ಆಸ್ಪತ್ರೆ ಯಶಸ್ವಿಯಾಗಬಹುದೆಂದು ರೋಗಿಗಳು, ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.
ಹೌದು, ಇಲ್ಲಿ ಚಿಕಿತ್ಸೆಗೆಂದು ದಿನಂಪ್ರತಿ ಆಗಮಿಸುವ ನೂರಾರು ರೋಗಿಗಳಿಗೆ ಆಸ್ಪತ್ರೆ ಆವರಣದಲ್ಲಿ ಕುಳಿತುಕೊಳ್ಳಲು ಸಮರ್ಪಕವಾದ ಆಸನಗಳ ವ್ಯವಸ್ಥೆಯಿಲ್ಲ. ರೋಗಿಗಳಿಗೆ ಕುಡಿಯಲು ಶುದ್ಧ ಕುಡಿಯುವ ನೀರು ಸಹ ಲಭ್ಯವಿಲ್ಲದ ಕಾರಣ ಸಿಕ್ಕ ಸಿಕ್ಕ ನೀರು ಕುಡಿದು ಆರೋಗ್ಯ ಇನ್ನಷ್ಟು ಹದಗೆಡುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಗುತ್ತಿಗೆ ಆಧಾರದ ಮೇಲಿರುವ ಕಾರಣ ಅವರೂ ಖಾಸಗಿ ಆಸ್ಪತ್ರೆಗಳಲ್ಲಿಯೇ ಸೇವೆಗೆ ಮುಂದಾಗಿದ್ದಾರೆ. ಇತ್ತ ಸರ್ಕಾರಿ ಆಸ್ಪತ್ರೆಗೆ ಬಂದ ರೋಗಿಗಳು ಗಂಟೆಗಟ್ಟಲೆ ಕಾಯಬೇಕು. ಅಥವಾ ವೈದ್ಯರಿಗೆ ಕರೆ ಮಾಡಿ ಬರಮಾಡಿಕೊಳ್ಳಬೇಕು. ಹೀಗಾಗಿ ಆಸ್ಪತ್ರೆಗೆ ಕಾಯಂ ವೈದ್ಯರ ನೇಮಕಾತಿ ಅನಿವಾರ್ಯವಿದೆ. ಕೊನೆ ಪಕ್ಷ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರೆ ಸೂಕ್ತ ಸೌಲಭ್ಯ ದೊರಕಬಹುದು ಎಂಬ ಕಾರಣಕ್ಕೆ ಸಾರ್ವಜನಿಕರು ಈ ನಿಟ್ಟಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.