ಬಾಗಲಕೋಟೆ: ಇಳಕಲ್ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದ ಸಿದ್ದೇಶ್ವರ ಮಠದಲ್ಲಿ ದಾಸೋಹ ಹಾಗೂ ಪೂಜೆ ಪುನಸ್ಕಾರ ಪ್ರಾರಂಭವಾಗಿದೆ.
ಸುಕ್ಷೇತ್ರ ಸಿದ್ದೇಶ್ವರ ಮಠದಲ್ಲಿ ಪೂಜೆ ಪ್ರಾರಂಭ ನಿರಂತರ ದಾಸೋಹ ಮಠ ಎಂದು ಪ್ರಸಿದ್ಧವಾಗಿರುವ ಈ ಮಠದಲ್ಲಿ ಲಾಕ್ಡೌನ್ ಸಮಯದಲ್ಲಿ ಭಕ್ತರ ಪ್ರವೇಶಕ್ಕೆ ನಿಷೇಧ ಹಾಗೂ ದಾಸೋಹ ಸ್ಥಗಿತಗೊಳಿಸಲಾಗಿತ್ತು. ಇದೀಗ ಕೇಂದ್ರದ ಅನುಮತಿಯಂತೆ ಜೂನ್ 8 ರಿಂದ ಸಿದ್ದೇಶ್ವರ ಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ, ಪುನಸ್ಕಾರ ಸಲ್ಲಿಸಿ, ಅನ್ನ ದಾಸೋಹ ಪ್ರಾರಂಭಿಸಲಾಯಿತು.
ಮಠದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅನ್ನ ದಾಸೋಹ ವಿತರಣೆ ಮಾಡಲಾಗುತ್ತಿದ್ದು, ಭಕ್ತರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಪ್ರಕೃತಿ ರಮಣೀಯ ಸೌಂದರ್ಯದ ನಡುವೆ ಇರುವ ಈ ಧಾರ್ಮಿಕ ಮಠದಲ್ಲಿ ದಿನದ 24 ಗಂಟೆಗಳ ಕಾಲ ಅನ್ನ ದಾಸೋಹ ಇರುತ್ತದೆ. ಅಮಾವಾಸ್ಯೆ ದಿನದಂದು ಭಕ್ತರ ಸಂಖ್ಯೆ ಹೆಚ್ಚಾಗಲಿದ್ದು, ಅನ್ನ ದಾಸೋಹ ಮಾಡಿಕೊಂಡು,ಪೂಜೆ ಪುನಸ್ಕಾರ ಸಲ್ಲಿಸುವುದಕ್ಕೆ ಭಕ್ತರು, ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು, ಅನ್ನ ದಾಸೋಹ ಮಾಡಬೇಕು ಎಂದು ಸ್ವಾಮೀಜಿ ಭಕ್ತರಿಗೆ ಕರೆ ನೀಡಿದ್ದಾರೆ.