ಬಾಗಲಕೋಟೆ: ಆರ್‌ಎಸ್‌ಎಸ್ ಸಂಘಟನೆ ಇಲ್ಲವಾದಲ್ಲಿ ದೇಶ ಪಾಕಿಸ್ತಾನ ಆಗುತ್ತಿತ್ತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗು ಜೆಡಿಎಸ್‌ನಿಂದ ಕುಮಾರಸ್ವಾಮಿ ಇಬ್ಬರೂ ಕೂಡ ಮುಸ್ಲಿಂ ಸಮುದಾಯದ ಮೇಲೆ ಕಣ್ಣಿಟ್ಟು ಆರ್‌ಎಸ್‌ಎಸ್ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ನೆಹರು ಹಾಗೂ ಇಂದಿರಾಗಾಂಧಿ ಅವರ ಕಾಲದಲ್ಲಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದಾಗ ಅವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಇವರು ಯಾರು? ನಮ್ಮ ಲೆಕ್ಕಕ್ಕೆ ಎಂದು ಕಾಂಗ್ರೆಸ್ ಹಾಗೂ ಜನತಾದಳ ನಾಯಕರಿಗೆ ಈಶ್ವರಪ್ಪ ತಿರುಗೇಟು ಕೊಟ್ಟರು.
ಆರ್‌ಎಸ್‌ಎಸ್ ಇಡೀ ದೇಶದಲ್ಲಿ ಇರುವ ಯುವಕರಿಗೆ ರಾಷ್ಟ್ರಭಕ್ತಿ ನಿರ್ಮಿಸುವ ದೊಡ್ಡ ಸಂಸ್ಥೆ ಆಗಿದೆ. ಸಂಘವೇ ಇಲ್ಲವಾದಲ್ಲಿ ಇವತ್ತು ದೇಶ ಪಾಕಿಸ್ತಾನ ಆಗುತ್ತಿತ್ತು. ಐಎಎಸ್, ಐಪಿಎಸ್ ಅಧಿಕಾರಿಗಳ ಮೂಲಕ ದೇಶದಲ್ಲಿ ಆರ್‌ಎಸ್‌ಎಸ್ ಅಧಿಕಾರ ನಡೆಸುತ್ತಿದೆ ಎಂದು ಮೆದುಳು ಮೇಲೆ ಪೂರೆ ಬಂದಿರುವವರು ಇಂತಹ ಹೇಳಿಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಈ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಆರ್‌ಎಸ್‌ಎಸ್ ಸಂಸ್ಥೆಯಿಂದ ಬಂದಿದ್ದು ವಿಶ್ವದ ಗಮನ ಸೆಳೆದಿದ್ದಾರೆ. ರಾಜ್ಯಪಾಲರು ಆರ್‌ಎಸ್‌ಎಸ್, ದೇಶದ ಅನೇಕ ಮುಖ್ಯಮಂತ್ರಿಗಳು ಆರ್‌ಎಸ್‌ಎಸ್‌ನಿಂದಲೇ ಬಂದಿದ್ದಾರೆ. ಸಂಘ ಏನೂ ಮಾಡಲ್ಲ. ಆದರೆ ಸಂಘದಿಂದ ತರಬೇತಿ ಪಡೆದು, ಶಿಕ್ಷಣ ಪಡೆದು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.