ಬಾಗಲಕೋಟೆ: ಕೊರೊನಾ ಭೀತಿಯಿಂದ ಸರಿಯಾದ ಮಾರುಕಟ್ಟೆ ಇಲ್ಲದೆ ಕುಂಬಳಕಾಯಿ ಬೆಳೆದ ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯ ಮುಧೋಳ ತಾಲೂಕಿನ ರೊಗಿ ಗ್ರಾಮದ ಲಕ್ಷ್ಮಣ ಹನಮಪ್ಪ ಶಿರಬೂರು ಎಂಬ ರೈತರು ತಮ್ಮ 2.5 ಎಕರೆ ಪ್ರದೇಶದಲ್ಲಿ 20 ಟನ್ ಮೈಕೋ ಕುಂಬಳಕಾಯಿ ಬೆಳೆದಿದ್ದಾರೆ. ಆದರೆ ಕೊರೊನಾ ಭೀತಿಯಿಂದ ಯಾರೂ ಖರೀದಿ ಮಾಡದೆ ಕಾಯಿ ಹಾಳಾಗುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿಗಳ ಹಾನಿ ಉಂಟಾಗಿದ್ದು, ರೈತ ಪರದಾಡುವಂತಾಗಿದೆ.
ಬೆಳಗಾವಿ ಹಾಗೂ ಮಹಾರಾಷ್ಟ್ರ ರಾಜ್ಯದ ಮಾರುಕಟ್ಟೆಗೆ ಕುಂಬಳಕಾಯಿ ಕಳಿಸಲಾಗುತ್ತಿತ್ತು. ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ಕೊರೊನಾ ಭೀತಿಯಿಂದ ವ್ಯಾಪಾರ ವಹಿವಾಟು ಕುಸಿದು ಹೋಗಿದೆ. ಇದರಿಂದ ಖರೀದಿ ಮಾಡುವವರೇ ಇಲ್ಲದೆ ಕಾರಣ ಬೇಡಿಕೆ ಸಂಪೂರ್ಣ ನೆಲ ಕಚ್ಚಿದೆ. ಈಗಾಗಲೇ ಐದು ಟನ್ನಷ್ಟು ಕುಂಬಳಕಾಯಿ ಜಮೀನಿನಲ್ಲಿ ಹಾಳಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಇದ್ದ ಅಲ್ಪ ಸ್ವಲ್ಪ ಕುಂಬಳಕಾಯಿ ಮಾರಾಟ ಮಾಡಬೇಕೆಂದರೆ ಯಾರೂ ಖರೀದಿಗೆ ಬರುತ್ತಿಲ್ಲ. ಇದರಿಂದ ಅಂದಾಜು 3 ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದ್ದು, ಚಿಂತಾಜನಕ ಪರಿಸ್ಥಿತಿ ಎದುರಾಗಿದೆ. ಮದುವೆ, ಮುಂಜಿ, ಗೃಹ ಪ್ರವೇಶ ಸೇರಿದಂತೆ ಯಾವುದೇ ಶುಭಕಾರ್ಯಗಳು ನಡೆಯದ ಹಿನ್ನೆಲೆ ಇನ್ನಷ್ಟು ತೊಂದರೆ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಕೃಷಿ ಇಲಾಖೆ ಇಲ್ಲವೆ ತೋಟಗಾರಿಕೆ ಇಲಾಖೆಯವರು ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಲಕ್ಷ್ಮಣ ಶಿರಬೂರು ಮನವಿ ಮಾಡಿಕೊಂಡಿದ್ದಾರೆ.