ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಾಗಲಕೋಟೆ: ಜೆಡಿಎಸ್ ಅಪ್ಪ ಮಕ್ಕಳ ಪಕ್ಷ, ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ಮಾಡುವುದನ್ನು ಬಿಟ್ಟರೆ, ಬೇರೆ ಏನು ಮಾಡಿಲ್ಲ ಎಂದು ಹುನಗುಂದ ಮತಕ್ಷೇತ್ರ ಶಾಸಕ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಈಗ 45% ಸರ್ಕಾರ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಕಿಡಿಕಾರಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ರಾಜ್ಯದ ಜನ ಎಲ್ಲಿ ಕೂರಿಸಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಬೇಜವಾಬ್ದಾರಿ ಮಾತು ಬರುತ್ತೆ ಅಂತ ಏನೇನೋ ಮಾತನಾಡಿದರೆ, ಜನರು ತಕ್ಕ ಉತ್ತರ ಕೊಟ್ಟಿದ್ದಾರೆ. 19 ಸೀಟು ಕೊಡುವ ಮೂಲಕ ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ. ಅಪ್ಪ ಮಕ್ಕಳದ್ದು ಭ್ರಷ್ಟಾಚಾರ ಬಿಟ್ರೆ ಬೇರೇನು ಉದ್ಯೋಗ ಇಲ್ಲ ಎಂದು ಗಂಭೀರ ಆರೋಪ ಮಾಡಿದ್ರು.
ಜೆಡಿಎಸ್ ಇದು ಅಪ್ಪ ಮಗನ ಪಕ್ಷ, ಸುಮ್ಮನೆ ಆರೋಪ ಮಾಡ್ತಾರೆ, ಹಿಂದೆ ಬಿಜೆಪಿ ಜೊತೆ ಎಷ್ಟು ಸಾರಿ ಶಾಮೀಲಾಗಿದ್ದಾರೆ ಎಂದು ಪ್ರಶ್ನೆ ಮಾಡಿದ ಕಾಶಪ್ಪನವರ, ಎಷ್ಟು ಕಡೆ ಅಭ್ಯರ್ಥಿ ಹಾಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲಿಸಲು ಕೆಲಸ ಮಾಡಿಲ್ವಾ? ಅವಾಗೆ ನಾವು ಶಾಮೀಲ ಅಗಿದ್ವ? ಇವರೆಷ್ಟು ಪರ್ಸೆಂಟೇಜ್ ಕಮಿಷನ್ ಹೊಡೆದಿದ್ದಾರೆ ಕೇಳಿ, ಏನು ಸತ್ಯವಿದೆ ಕುಮಾರಸ್ವಾಮಿ ಹೇಳಲಿ, ಅದಕ್ಕೆ ಜನರು ಅವರನ್ನು ಮನೆಯಲ್ಲಿ ಕೂರಿಸಿದ್ದಾರೆ ಎಂದು ಎಚ್ಡಿಕೆ ವಿರುದ್ಧ ಕುಟುಕಿದರು.
ಕುಮಾರಸ್ವಾಮಿ ಬೇಡವೇ ಬೇಡ ಅಂತಾ ಜನ ಮೂಲೆಗೆ ತಳ್ಳಿದ್ದಾರೆ ಎಂದು ಟಾಂಗ್ ನೀಡಿದ ಕಾಶಪ್ಪನವರ, ಇನ್ನಾದರೂ ಅರ್ಥ ಮಾಡಿಕೊಂಡು, ತಪ್ಪು ಹೇಳಿಕೆಗಳನ್ನು ನೀಡುವದನ್ನೂ ಬಿಡಬೇಕು, ಜೆಡಿಎಸ್ ಪಕ್ಷ ಬಿಜೆಪಿ ಬಿ ಪಕ್ಷ ಅಂತಾ ನಾನೇ ಹೇಳಿದ್ದೆ. ಅದು ಸತ್ಯವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿಗಳು ಎಂಪಿ ಎಲೆಕ್ಷನ್ವರೆಗೆ ಎಂಬ ಬಿಜೆಪಿ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಾಶಪ್ಪನವರ್, ವಿರೋಧಿಗಳಿಗೆ ಮಾತನಾಡಲು ಅಸ್ತ್ರವೇ ಇಲ್ಲ, ಸರ್ಕಾರ ಬಂದು 15 ದಿನ ಆಗಿರಲಿಲ್ಲ ಎಲ್ಲಿ ಗ್ಯಾರಂಟಿ ಅಂತಾ ಬಾಯಿ ಬಾಯಿ ಬಡಿದುಕೊಂಡರು. ಗ್ಯಾರಂಟಿಗಳನ್ನು ಕೊಟ್ಟ ಮೇಲೆ ಇದಕ್ಕೂ ಶುರು ಮಾಡಿದ್ದಾರೆ. ಈಗ ಬಾಯಿ ಬಡಿದುಕೊಳ್ಳುವ ಕೆಲಸ ಬಿಜೆಪಿಗರದ್ದು, ನಾವು ಕೆಲಸ ಮಾಡುವವರು, ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ ಮಾಡುತ್ತೇವೆ ಎಂದು ಹೇಳಿದರು.
ಅವಕಾಶ ಮುಗಿದಿಲ್ಲ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗುತ್ತೆ: ಮಂತ್ರಿಯಾಗಿ ಕ್ಷೇತ್ರಕ್ಕೆ ಬರ್ತೀನಿ ಅಂದಿದ್ರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಾಶಪ್ಪನವರ, ಹೌದು ಅಂದಿದ್ದೆ. ಅವಕಾಶ ಇನ್ನೂ ಇದೆ, ಅವಕಾಶ ಮುಗಿದಿಲ್ಲ. ವಿನಯ್ ಕುಲಕರ್ಣಿ ಅವರು ಕೂಡ 3 ಬಾರಿ ಗೆದ್ದಂತಹ ಶಾಸಕರಾಗಿದ್ದಾರೆ. ಅವರಿಗೂ ಸಚಿವ ಸ್ಥಾನ ಸಿಗಬೇಕಾಗಿತ್ತು. ನನ್ನ ಜಿಲ್ಲೆಯಲ್ಲಿ ಯಾರೂ ಆಗಿಲ್ಲ ಅಂತಾ ನಮ್ಮ ಸಮುದಾಯ, ನನ್ನ ತಂದೆ ನಂತರ ನಮ್ಮ ಸಮಾಜದಲ್ಲಿ ಯಾರೂ ಆಗಿಲ್ಲ ಅನ್ನೋದು ಜನತೆಯ ಕೂಗಿದೆ. ಭರವಸೆ ಇತ್ತು, ಮುಂದಿನ ದಿನಗಳಲ್ಲಿ ಅವಕಾಶ ಕೊಡುವುದಾಗಿ ನಾಯಕರು ಹೇಳಿದ್ದಾರೆ. ಖಂಡಿತ ಆ ವಿಶ್ವಾಸ ಇಟ್ಟು ನಡೆಯುತ್ತೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಕಾಶಪ್ಪನವರ ಕುಟುಂಬದಿಂದ ಭರ್ಜರಿ ತಯಾರಿ ನಡೆದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ದಿನಗಳಲ್ಲಿ ನೋಡೋಣ. ಅದನ್ನು ಪಕ್ಷ ನಿರ್ಧಾರ ಮಾಡುತ್ತದೆ. ಯಾರು ಅಭ್ಯರ್ಥಿ ಆಗ್ತಾರೆ ಅನ್ನೋದನ್ನು ನಾನು ಹೇಳೋಕ ಆಗಲ್ಲ. ಅವರವರ ಭಾವಕ್ಕೆ, ಅವರವರ ಭಕುತಿಗೆ ಬಿಟ್ಟ ವಿಚಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂಓದಿ:ಸಂಸದ ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ: ಸಿಎಂ ಸಿದ್ದರಾಮಯ್ಯ