ಬಾಗಲಕೋಟೆ : ರಾಜ್ಯದಲ್ಲಿ ಕೊರೊನಾ ಕೇಸ್ ನಿಯಂತ್ರಿಸುವ ಸಲುವಾಗಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಸರ್ಕಾರದ ನಿಯಮವನ್ನು ಮೀರಿ ಜಾತ್ರೆಯ ನಿಮಿತ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಹೂರಟಿದ್ದಾರೆ.
ಪ್ರತಿವರ್ಷ ಬಾದಾಮಿಯ ಬನಶಂಕರಿ ದೇವಿಯ ಜಾತ್ರೆಗೆ ಇಳಕಲ್ ಪಟ್ಟಣದಿಂದ ಪಾದಯಾತ್ರೆ ಮೂಲಕ ಹೋಗುವುದು ವಾಡಿಕೆ ಇದೆ. ಅದರಂತೆ ಇಂದು ಸಹ ಇಲಕಲ್ಲ ಪಟ್ಟಣದಿಂದ ಸಾಮೂಹಿಕವಾಗಿ ಭಕ್ತರು ಪಾದಯಾತ್ರೆ ನಡೆಸಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಬನಶಂಕರಿ ಜಾತ್ರೆಗಾಗಿ ಪಾದಯಾತ್ರೆ ಹೊರಟಿರುವುದು ಆತಂಕಕ್ಕೆ ಕಾರಣವಾಗಿದೆ.
ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆ ಮೂಲಕ ಜಾತ್ರೆಗೆ ಹೋಗುತ್ತಾರೆ. ಇಲಕಲ್ ಪಟ್ಟಣದಿಂದ ಹೂಲಗೇರಿ, ಬಂಡರಗಲ್, ಕಾಟಾಪೂರ, ದಮ್ಮೂರು, ಗುಡೂರು, ಪಟ್ಟದಕಲ್, ಶಿವಯೋಗ ಮಂದಿದ ಮೂಲಕ ಬನಶಂಕರಿ ಹೋಗಿ ತಲುಪುತ್ತಾರೆ. ಇಲಕಲ್ ಮಾತ್ರವಲ್ಲದೆ ಪಕ್ಕದ ರಾಯಚೂರು, ಕೊಪ್ಪಳ ಜಿಲ್ಲೆಯಿಂದಲೂ ಭಕ್ತರು ತೆರಳುತ್ತಾರೆ.