ಬಾಗಲಕೋಟೆ: ವೀಕೆಂಡ್ ಕರ್ಫ್ಯೂ ಜಿಲ್ಲೆಯಾದ್ಯಂತ ಮೊದಲು ದಿನ ಯಶಸ್ಸು ಕಂಡಿದ್ದು, ಪ್ರಮುಖ ರಸ್ತೆಗಳು ಸಂಚಾರ ಇಲ್ಲದೆ ಬಿಕೋ ಎನ್ನುತ್ತಿದ್ದವು.
ನಗರದಲ್ಲಿ ಮದುವೆಗಳು ಇರುವುದರಿಂದ ಬಸ್ ಸಂಚಾರ ಪ್ರಾರಂಭವಾಗಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಇಲ್ಲದೆ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಈ ಮಧ್ಯೆ ಮಂಗಲ ಭವನದಲ್ಲಿ ನಡೆಯುತ್ತಿದ್ದ ಮದುವೆಗಳ ಮೇಲೆ ಅಧಿಕಾರಿಗಳು ನಿಗಾ ಇಟ್ಟಿದ್ದರು. ಜಿಲ್ಲಾಡಳಿತವು ಅಧಿಕಾರಗಳ ವಿಶೇಷ ತಂಡ ರಚನೆ ಮಾಡಿ, ಜಿಲ್ಲೆಯಾದ್ಯಂತ ನಡೆಯುತ್ತಿದ್ದ ಮದುವೆ ಮನೆಗಳಿಗೆ ತೆರಳಿ ಎಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದಾರೆ ಎಂದು ಮಾಹಿತಿ ಸಂಗ್ರಹ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರರು, ನಗರಸಭೆ ಆಯುಕ್ತರು ಹಾಗೂ ಸಿಬ್ಬಂದಿ ಸಂಚಾರ ಮಾಡಿ, ಕಟ್ಟುನಿಟ್ಟಾಗಿ ಆದೇಶ ಪಾಲಿಸುತ್ತಿರುವ ಬಗ್ಗೆ ನಿಗಾ ವಹಿಸಿದ್ದರು. ಔಷಧ ಅಂಗಡಿ, ಆಸ್ಪತ್ರೆ ಮಾತ್ರ ತೆರೆಯಲಾಗಿದ್ದು, ಇತರ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಮಾಡಿ, ಸಂಚಾರ ದಟ್ಟಣೆ ಕಡಿತಗೊಳಿಸಲಾಗಿತ್ತು.
ಬಾಗಲಕೋಟೆಯಲ್ಲಿ ಯಶಸ್ವಿಯಾದ ವೀಕೆಂಡ್ ಕರ್ಫ್ಯೂ ಬೇಕಾಬಿಟ್ಟಿ ಸಂಚಾರ ಮಾಡುತ್ತಿರುವವರ ಮೇಲೆ ಪೊಲೀಸರು ನಿಗಾ ಇಟ್ಟು ಲಾಠಿ ರುಚಿ ತೋರಿಸುತ್ತಿದ್ದರು. ಮಾಜಿ ಶಾಸಕ ಪಿ.ಹೆಚ್,ಪೂಜಾರ ಅವರ ಮಗಳ ಮದುವೆ ಸೇರಿದಂತೆ ಇತರ ಮುಖಂಡರ ಕುಟುಂಬದವರ ಮದುವೆ ಇದ್ದರೂ ಸಹ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹೆಚ್ಚು ಜನ ಸೇರಿದಂತೆ ನಿಗಾ ವಹಿಸಿದ್ದರು. ಈ ಮಧ್ಯೆ ಶಾಸಕ ವೀರಣ್ಣ ಚರಂತಿಮಠ ನಗರದ ಪ್ರಮುಖ ಮಾರುಕಟ್ಟೆಯಲ್ಲಿ ಸಂಚಾರ ಮಾಡಿ, ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ ಆಗಿರುವ ಬಗ್ಗೆ ವೀಕ್ಷಣೆ ಮಾಡಿದರು. ವಿನಾ ಕಾರಣ ಸಂಚಾರ ಮಾಡುತ್ತಿರುವವರನ್ನು ತರಾಟೆ ತೆಗೆದುಕೊಂಡರು.