ಬಾಗಲಕೋಟೆ: ಮನೆಯಲ್ಲಿ ಕಾಡುವ ಬಡತನ. ತನ್ನ ಇಬ್ಬರು ಮಕ್ಕಳು ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲಾಗದ ಹತಾಶೆ. ಜತೆಯಲ್ಲಿ ನರ ದೌರ್ಬಲ್ಯ ಸಂಬಂಧಿ ಕಾಯಿಲೆಯ ನೋವು. ಇದು ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಶೇಖರ ಹಕ್ಕಲದಡ್ಡಿ ಅವರ ದುಸ್ಥಿತಿ.
ಶೇಖರ ಕಳೆದ ಐದು ವರ್ಷಗಳಿಂದ ನರ ದೌರ್ಬಲ್ಯ ಸಮಸ್ಯೆಯಿಂದ ದಯನೀಯ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ನೇಯ್ಗೆಯನ್ನೇ ನಂಬಿರುವ ಈ ಜೀವಕ್ಕೆ ಇದೀಗ ಕಾಯಿಲೆಯಿಂದ ಬಡಪಾಯಿ ಉದ್ಯೋಗ ಮಾಡಲಾಗದ ಸ್ಥಿತಿಗೆ ತಲುಪಿದ್ದಾರೆ. ನೇಯ್ಗೆ ಮಾಡಲೂ ಸಹ ಬಾರದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವುದು ದಯನೀಯವಾಗಿದೆ.
ಆಸ್ಪತ್ರೆಗೆ ತೆರಳಲೂ ಹಣವಿಲ್ಲ:ಕಾಯಿಲೆಯ ಚಿಕಿತ್ಸೆ ಹೋಗಲಿ, ಆಸ್ಪತ್ರೆಗೆ ತೆರಳಲು ಪ್ರಯಾಣಕ್ಕೆ ಹಣವಿಲ್ಲ. ಅಷ್ಟೋ-ಇಷ್ಟೋ ಕೂಡಿಸಿಟ್ಟ ಹಣವು ಪ್ರಾಥಮಿಕ ಚಿಕಿತ್ಸೆಯಲ್ಲಿಯೇ ಖಾಲಿಯಾಗಿದ್ದು, ತಮ್ಮ ಪತ್ನಿಯೊಂದಿಗೆ, ಇನ್ನೂ ಓದಿನಲ್ಲಿರುವ ಆತನ ಇಬ್ಬರು ಮಕ್ಕಳೊಂದಿಗಿನ ಕುಟುಂಬದ ನೊಗ ಹೊತ್ತಿರುವ ಶೇಖರ ಅವರಿಗೆ ನಿರ್ವಹಣೆ ಬಹುದೊಡ್ಡ ಸಮಸ್ಯೆಯಾಗಿದೆ. ಇಡೀ ಕುಟುಂಬಕ್ಕೆ ಇವರು ಪ್ರತಿದಿನ ನೇಯ್ಗೆ ಮಾಡುತ್ತಿದ್ದ ವೇತನವೇ ಆಸರೆಯಾಗಿತ್ತು.