ಬಾಗಲಕೋಟೆ :ಸಮಾಜದ ಹೋರಾಟವನ್ನು ನಾನು ಎಂದೂ ಮಂತ್ರಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಳಸಿಕೊಂಡಿಲ್ಲ. ಸಮಾಜವನ್ನು ದುರುಪಯೋಗ ಮಾಡಿಕೊಳ್ಳುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.
ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಎಲ್ಲಾ ಸಮುದಾಯಗಳ ಧ್ವನಿಯಾಗಿದ್ದೇನೆ. ಬೊಮ್ಮಾಯಿಯವರ ಮೇಲೆ ವಿಶ್ವಾಸ ಇದೆ. ಕಾಶಪ್ಪನವರ ಮತ್ತು ಸ್ವಾಮೀಜಿಗಳ ಹೋರಾಟ ವ್ಯರ್ಥವಾಗೋದಿಲ್ಲ. ಸಿಎಂ ಬೊಮ್ಮಾಯಿಯವರು ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆ ಇದೆ ಎಂದರು.
ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯೆ :ಮೋದಿ ದೇಶ ಮಾರಾಟ ಮಾಡುತ್ತಾರೆ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಮೋದಿಯವರೇನು ಸಂಸಾರಕ್ಕಾಗಿ ಅಧಿಕಾರ ಮಾಡುತ್ತಿಲ್ಲ. ಅವರು ಯಾವುದರಲ್ಲೂ ಸ್ವಾರ್ಥ ಮಾಡಿಲ್ಲ. ಮೋದಿಯವರ ಕುಟುಂಬ ರಾಜಕಾರಣದಿಂದ ದೂರ ಇದೆ. ನರೇಂದ್ರ ಮೋದಿಯವರು ಯಾವತ್ತು ಸ್ವಾರ್ಥ ಬಯಸೋದಿಲ್ಲ ಎಂದರು.
ಬಂದ್ಗೆ ಅಸಮಾಧಾನ :ರೈತರು ಇಂದು ನಡೆಸಿದ ಭಾರತ್ ಬಂದ್ಗೆ ವಿರೋಧ ವ್ಯಕ್ತಪಡಿಸಿದ ಯತ್ನಾಳ್, ಇದು ರೈತರ ಹೋರಾಟವಲ್ಲ. ದೇಶದ್ರೋಹಿಗಳ ಹೋರಾಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯತ್ನಾಳ್ಗೆ ಮಂತ್ರಿಸ್ಥಾನ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿ, ನೋಡ್ರೀ ಎಷ್ಟೋ ಮಂದಿ ಯೋಗ್ಯರು ಹಂಗೇ ಸತ್ತಾರೆ. ಹಾಗೇ ನಾನು ಒಬ್ಬ ಅಂತಾ ತಿಳಿದುಕೊಳ್ರಿ ಎಂದು ವ್ಯಂಗ್ಯವಾಡಿದರು.
ಪಂಚಮಸಾಲಿ ಪೀಠದ ಜಗದ್ಗುರು ಹಾಗೂ ವಿಜಯಾನಂದ ಕಾಶಪ್ಪನವರನವರು ಜೊತೆಗೂಡಿ ರಾಜ್ಯದಲ್ಲಿ ಪಾದಯಾತ್ರೆ ಹಮ್ಮಿಕೊಂಡು ಜಾಗೃತಿ ಮೂಡಿಸಿದ್ದಾರೆ. ನಮ್ಮ ಸ್ವ -ಹಿತಕ್ಕಾಗಲಿ, ರಾಜಕೀಯ ಲಾಭಕ್ಕಾಗಲಿ ಮೀಸಲಾತಿ ಕೇಳುತ್ತಿಲ್ಲ. ನಮ್ಮ ಸಮುದಾಯದ ಕೆಳ ಮಟ್ಟದ ಜನಾಂಗದವರಿಗೆ ಶಿಕ್ಷಣಕ್ಕಾಗಿ ಈ ಹೋರಾಟ ಮಾಡುತ್ತಿದ್ದೇವೆ ಎಂದರು.