ಬಾಗಲಕೋಟೆ: ಕಳೆದ ಫೆಬ್ರವರಿಯಿಂದ ಸಂಪೂರ್ಣ ಬತ್ತಿ ಹೋಗಿದ್ದ ರಬಕವಿ-ಬನಹಟ್ಟಿ ನಗರ ಸಮೀಪ ಇರುವ ಮಹಿಷವಾಡಗಿ ಬ್ಯಾರೇಜ್ ತುಂಬಿ ಹರಿಯುತ್ತಿದೆ. ಇದನ್ನು ಕಣ್ತುಂಬಿಸಿಕೊಳ್ಳಲು ಜನ ಸಾಗರವೇ ಹರಿದು ಬಂದಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಹಿನ್ನಲೆ ಕೃಷ್ಣೆಗೆ ನೀರು ಹರಿಸಿದ್ದರಿಂದ ಹಿಪ್ಪರಗಿ ಜಲಾಶಯದತ್ತ ನೀರು ಸಾಗುತ್ತಿದೆ. ರಾಜಾಪುರ ಜಲಾಶಯದಿಂದ 1 ಸಾವಿರ ಕ್ಯುಸೆಕ್ಸ್ ಪ್ರಮಾಣದಲ್ಲಿ ನೀರಿನ ಹರಿವಿದ್ದು, ಇಂದು ಹಿಪ್ಪರಗಿ ಜಲಾಶಯ ತಲುಪಲಿದೆ. ಇನ್ನೂ ನೀರಿನ ಬವಣೆಯಿಂದ ತತ್ತರಿಸಿ ಹೋಗಿದ್ದ ಜನತೆ ತಂಡೋಪತಂಡವಾಗಿ ಕೃಷ್ಣೆಯತ್ತ ಬಂದು ನದಿಯಲ್ಲಿನ ನೀರನ್ನು ನೋಡಿ ಸಂತಸದ ಛಾಯೆ ಹೊತ್ತು ವಾಪಸ್ ನಗರದತ್ತ ತೆರಳುತ್ತಿದ್ದರು.