ಬಾಗಲಕೋಟೆ: ಉತ್ತರ ಕರ್ನಾಟಕದ ಜೀವಜಲ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದೆ. ಇನ್ನು ಹಿಪ್ಪರಗಿ ಜಲಾಶಯ ಸಹ ಪೂರ್ತಿಯಾಗಿ ಖಾಲಿಯಾಗಿದ್ದು ಈ ಭಾಗದ ಜಮಖಂಡಿ, ರಬಕವಿ-ಬನಹಟ್ಟಿ, ತೇರದಾಳ, ಹಾರುಗೇರಿ, ಅಥಣಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ನೀರಿನ ಹಾಹಾಕಾರ ಮಿತಿ ಮೀರಿದೆ.
ರಾಜಕೀಯ ಮುಖಂಡರು ಇತ್ತ ಲೋಕ ಸಮರಲ್ಲಿ ಮುಳುಗಿದ್ದು ಅತ್ತ ಮತದಾರ ನೀರಿಗಾಗಿ ಅಲೆದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಕೋಯ್ನಾದಿಂದ ನೀರು ಬಂದೇ ಬಿಟ್ತು ಎನ್ನುವಂತಹ ಸಾಮಾಜಿಕ ತಾಣಗಳಲ್ಲಿನ ಹೇಳಿಕೆಗಳು ಹೇಳಿಕೆಗಳಾಗಿಯೇ ಉಳಿದಿದ್ದು, ನೀರು ಮಾತ್ರ ಬಂದಿಲ್ಲ. ಅಲ್ಲದೆ ಇದೇ ನೀರನ್ನ ಅವಲಂಬಿಸಿರುವ ಬಾಗಲಕೋಟೆ, ಬಿಜಾಪೂರ ಹಾಗೂ ಬೆಳಗಾವಿ ಜಿಲ್ಲೆಯ ರೈತರ ಪರಸ್ಥಿತಿ ಹೇಳತೀರದಾಗಿದೆ. ನೀರಿಲ್ಲದೇ ಬೆಳೆಗಳು ಒಣಗಿದ್ದು ರೈತ ಕಂಗಾಲಾಗಿದ್ದಾನೆ. ಕೋಯ್ನಾದಿಂದ ನೀರು ಬೀಡಿಸುದೊಂದೆ ಇದಕ್ಕೆ ಪರಿಹಾರ ಎನ್ನುತ್ತಾರೆ ಸ್ಥಳೀಯರು.
ರಾಜಕೀಯ ಧುರಿಣರು, ಅಧಿಕಾರಿಗಳು ಚುನಾವಣೆ ಪ್ರಕ್ರಿಯೆಯಲ್ಲಿ ಮುಳುಗಿದ್ದರಿಂದ ಜನರ ಸಮಸ್ಯೆಗೆ ಸ್ಪಂದಿಸುವರೇ ಇಲ್ಲದಂತಾಗಿದೆ. ಜಿಲ್ಲೆಯ ರಬಕವಿ-ಬನಹಟ್ಟಿ, ರಾಂಪುರ, ಹೊಸೂರು ಸೇರಿದಂತೆ ಹಲವು ಕಡೆಗಳಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ದಿನಗಟ್ಟಲೇ ಸರದಿಯಲ್ಲಿ ನಿಂತು ನೀರು ಪಡೆಯುವ ಸ್ಥಿತಿ ಬಂದಿದೆ.