ಬಾಗಲಕೋಟೆ: ಜಿಲ್ಲೆಯಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಧಾರ್ಮಿಕ ಕ್ಷೇತ್ರ ಅಣ್ಣ ಬಸವಣ್ಣ ಐಕ್ಯ ಸ್ಥಳವಾಗಿರುವ ಕೂಡಲಸಂಗಮ ಸಂಪೂರ್ಣ ಜಲಾವೃತವಾಗಿದೆ.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳ ತ್ರಿವೇಣಿ ಸಂಗಮವಾಗುವ ಪವಿತ್ರ ಸ್ಥಳವಾದ ಹುನಗುಂದ ತಾಲೂಕಿನ ಕೂಡಲಸಂಗಮದ ಸಂಗಮನಾಥೇಶ್ವರ ದೇಗುಲದ ಆವರಣಕ್ಕೆ ಪ್ರವಾಹದ ನೀರು ನುಗ್ಗಿದ್ದು, ಭಕ್ತರಿಗೆ ನಿಷೇಧ ಹೇರಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿಯವರು ಪಂಪ್ಸೆಟ್ ಮೂಲಕ ನೀರು ಹೊರಹಾಕುತ್ತಿದ್ದಾರೆ. ಕೂಡಲಸಂಗಮಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಇದೀಗ ಪ್ರವಾಹದ ನೀರು ದೇಗುಲಕ್ಕೆ ನುಗ್ಗಿದ್ದರಿಂದ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ದೇಗುಲ ಪ್ರವೇಶ ನಿಷೇಧಿಸಿ ಆದೇಶಿಸಿದೆ.