ಬಾಗಲಕೋಟೆ: ರಾಜಕಾರಣಿಗಳು ಯಾರನ್ನೂ ಪ್ರಚೋದಿಸಬಾರದು, ಯಾರನ್ನೂ ಓಲೈಕೆ ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಬೇಕಾಗಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಯಾರನ್ನೂ ಓಲೈಕೆ ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಬೇಕಾಗಿದೆ: ಪೇಜಾವರ ಶ್ರೀ ನಗರದಲ್ಲಿ ಇಂದು ಮಾತನಾಡಿದ ಶ್ರೀಗಳು, ಚುನಾವಣೆ ಸಮಯದಲ್ಲಿ ಮತೀಯ ವಿಚಾರವಾಗಿ ಚರ್ಚೆಗಳು ಬರುತ್ತದೆ. ನಂತರ ಕಡಿಮೆ ಆಗುತ್ತದೆ. ಮತಗಳನ್ನು ಪಡೆಯಲು ಒಂದೊಂದು ಬಗೆಯ ಹೇಳಿಕೆ ನೀಡಿ, ಜಾತಿಯ ಮತಗಳನ್ನು ಪಡೆದುಕೊಳ್ಳುವುದಕ್ಕೆ ಯತ್ನಿಸುತ್ತಾರೆ. ಇದರಿಂದ ಸಮಾಜದಲ್ಲಿ ಮತೀಯ ಸಾಮರಸ್ಯ ಕೆಡುತ್ತದೆ. ಆದ್ದರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಕೆದಡುವಂತಹ ಕೆಲಸ ಆಗಬಾರದು ಎಂದು ಸಲಹೆ ನೀಡಿದರು.
ಹಿಂಸೆ ಮಾಡುವುದು ಶೋಭೆ ತರುವ ವಿಚಾರವಲ್ಲ
ಯಾವುದೇ ಒಂದು ದೇಶದಲ್ಲಿ ಮತೀಯ ಕುರಿತು ಒಂದು ಮಾತು ಅಡ್ಡ ಬಂದಲ್ಲಿ, ಪ್ರಪಂಚದಲ್ಲಿ ಗಲಭೆಗಳುಂಟಾಗುತ್ತದೆ. ಆದರೆ, ಹಿಂದುಗಳಲ್ಲಿ ಅಂತಹ ಗಲಭೆ ಮಾಡುವಂತಹ ಪ್ರವೃತ್ತಿ ಇಲ್ಲ. ಏನು ಮಾಡಿದರೂ ಇವರು ಸುಮ್ಮನೆ ಇರುತ್ತಾರೆ ಎಂದು ಇನ್ನಷ್ಟು ಹಿಂಸೆ ಮಾಡುವುದು ಶೋಭೆ ತರುವ ವಿಚಾರವಲ್ಲ. ಪ್ರಜೆಗಳು ಕಾನೂನುನ್ನು ಕೈಗೆ ತೆಗೆದುಕೊಳ್ಳಬಾರದು ಎಂಬ ವಿಚಾರ ಇದ್ದರೆ, ಸರ್ಕಾರಗಳು ಮುಂದೆ ಬಂದು ಇಂತಹ ಪರಿಸ್ಥಿತಿಯನ್ನು ನಿವಾರಣೆ ಮಾಡಬೇಕು ಎಂದು ಶ್ರೀಗಳು ಹೇಳಿದರು.
ಸರ್ಕಾರದ ಮಧ್ಯೆ ಪ್ರವೇಶ ಅಗತ್ಯ
ಸರ್ವ ಮತೀಯರಿಗೆ ನೆಮ್ಮದಿಯಿಂದ ಬಾಳಲು ಏನು ವ್ಯವಸ್ಥೆ ಬೇಕು ಅದನ್ನು ಸರ್ಕಾರವೇ ಮುಂದೆ ನಿಂತು ಮಾಡಬೇಕು. ಸರ್ಕಾರ ಇರುವುದು ಯಾಕೆ? ಎಂದು ಪ್ರಶ್ನೆ ಮಾಡಿದ ಶ್ರೀಗಳು, ಸರ್ಕಾರ ಮುಂದಾಗದೇ ಇದ್ದಾಗ, ಭಾವನೆಗಳ ಕಟ್ಟೆ ಹೊಡೆದಾಗ ಗಲಭೆಗಳು ಪ್ರಾರಂಭವಾಗುತ್ತದೆ. ಆಗ ಪರಿಹರಿಸಲು ಯಾರಿಗೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಇಂತಹ ವಿಷಯದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಿ ಸಮಸ್ಯೆ ಪರಿಹರಿಸುವುದು ಅಗತ್ಯವಿದೆ ಎಂದರು.
ರಾಮ ಮಂದಿರದ ಬಗ್ಗೆ ಮಾತನಾಡಿದ ಶ್ರೀಗಳು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಡಿಪಾಯ ಕಾರ್ಯ ನಡೆದಿದ್ದು, ಕರ್ನಾಟಕದ ದೊಡ್ಡ ಬಳ್ಳಾಪುರ ಗ್ರೈನೆಟ್ ಶಿಲೆಗಳನ್ನ ತೆಗೆದುಕೊಂಡು ಹೋಗಲಾಗುತ್ತಿದೆ. ಕರ್ನಾಟಕ ಶಿಲೆಗಳು ಹೋಗುತ್ತಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.
ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯಿಸಿ, ಕೊರೊನಾದಿಂದ ಬೆಲೆ ಏರಿಕೆ ಆಗಿರುವುದು ಈಗಾಗಲೇ ಎಲ್ಲರಿಗೂ ತಿಳಿದ ವಿಷಯ. ಇಡೀ ಪ್ರಪಂಚದಲ್ಲಿ ಬೆಲೆ ಏರಿಕೆ ಆಗಿದೆ. ಒಬ್ಬರನ್ನು ಹೊಣೆ ಮಾಡುವುದು ಸರಿಯಲ್ಲ ಎಂದರು.
ಇನ್ನು ಕೋವಿಡ್ ಲಸಿಕೆ ನೀಡಿರುವುದಕ್ಕೆ ಜಗತ್ತೇ ಭಾರತ ದೇಶದ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. ಪ್ರಧಾನಿ ಮಂತ್ರಿ ಹಾಗೂ ಆರೋಗ್ಯ ಕಾರ್ಯಕರ್ತರ ಸಾಧನೆ ಏನು? ಎಂಬುದು ಜಗತ್ತಿಗೆ ಮನವರಿಕೆ ಆಗಿದೆ. ಆದರೆ ಕೋವಿಡ್ ನಿರ್ವಹಣೆ ಬಗ್ಗೆ ನಮ್ಮ ದೇಶದ ಪ್ರತಿ ಪಕ್ಷದವರು ಇಲ್ಲ ಸಲ್ಲದ ಮಾತುಗಳನ್ನು ಆಡಿದರು. ಯಾವ ಮುಂದುವರಿದ ದೇಶದಲ್ಲಿ ಆಗದೇ ಇರುವ ಸಾಧನೆ ಇಲ್ಲಿ ಆಗಿದೆ. ನಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮ ಪಡಬೇಕು. ವ್ಯರ್ಥವಾಗಿ ಪ್ರತಿಯೊಂದನ್ನು ಎತ್ತಿ ತೆಗಳುವ ಕೆಲಸ ಯಾರೂ ಮಾಡಬಾರದು ಎಂದು ಸ್ವಾಮೀಜಿ ಸಲಹೆ ನೀಡಿದರು.