ಬಾಗಲಕೋಟೆ : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ಹಲವು ದಿನಗಳೇ ಕಳೆದರೂ, ಅಪ್ಪುವಿನ ಮೇಲಿರುವ ಅಭಿಮಾನ ಹಾಗೂ ನೆನಪು ಮಾತ್ರ ಮರೆಯಲು ಅವರ ಅಭಿಮಾನಿಗಳಿಗೆ ಆಗುತ್ತಿಲ್ಲ. ಈಗ ಅವರ ಅಭಿಮಾನಿಯೋರ್ವ ತನ್ನ ಕುಟುಂಬ ಸಮೇತ ವಿಜಯಪುರದಿಂದ ಬೆಂಗಳೂರುವರೆಗೂ ಸುಮಾರು 500 ಕಿ.ಮೀ.ಗೂ ಹೆಚ್ಚು ದೂರ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಪಾದಯಾತ್ರೆ ಹೊರಟ ಅಪ್ಪು ಅಭಿಮಾನಿ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾದ ಧರೆಪ್ಪ ಅರ್ಧಾವೂರ ಎಂಬುವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಕುಟುಂಬ ಸಮೇತವಾಗಿ ವಿಜಯಪುರದಿಂದ ಬೆಂಗಳೂರಿನ ಪುನೀತ್ ರಾಜ್ ಕುಮಾರ್ ಸಮಾಧಿಯವರೆಗೂ ಪಾದಯಾತ್ರೆ ಪ್ರಾರಂಭಿಸಿದ್ದಾರೆ.
ಪುನೀತ್ ಅಭಿಮಾನಿಯಾದ ಇವರು, ತಮ್ಮ ಹೆಂಡತಿ ಹಾಗೂ 4 ಜನ ಮಕ್ಕಳೊಂದಿಗೆ ಕನ್ನಡ ಶಾಲೆಗಳ ಉಳಿವಿಗಾಗಿ, ನೇತ್ರದಾನದ ಸಾಮಾಜಿಕ ಕಳಕಳಿಗಾಗಿ ಹಾಗೂ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾ ಯಶಸ್ವಿಯಾಗಲೆಂದು ಪಾದಯಾತ್ರೆ ಹಮ್ಮಿಕೊಂಡಿದ್ದಾರಂತೆ.
ಮಾರುತಿ ಓಮಿನಿ ವಾಹನದ ಸುತ್ತಲೂ ಅಪ್ಪು ಹಾಗೂ ಡಾ.ರಾಜಕುಮಾರ್ ಅವರ ಫೋಟೋ, ಕನ್ನಡ ಧ್ವಜವನ್ನು ಹಾಕಿದ್ದಾರೆ. ಅಪ್ಪುವಿನ ಹಾಡನ್ನು ಧ್ವನಿವರ್ಧಕ ಮೂಲಕ ಕೇಳಿಸುತ್ತಾ, ರಸ್ತೆ ಉದ್ದಕ್ಕೂ ಸಾಗುತ್ತಿದ್ದಾರೆ. ವಾಹನದ ಮೇಲೆ ಕನ್ನಡ ಶಾಲೆ ಉಳಿವಿಗಾಗಿ ಹಾಗೂ ಅಂಗದಾನ ಮತ್ತು ನೇತ್ರದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ವಿಜಯಪುರದಿಂದ ಈಗ ಇಳಕಲ್ಲ ಪಟ್ಟಣಕ್ಕೆ ಇವರ ಪಾದಯಾತ್ರೆ ಬಂದು ತಲುಪಿದ್ದು, ರಾಷ್ಟ್ರೀಯ ಹೆದ್ದಾರಿ ಮೂಲಕ ಕುಷ್ಟಗಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮೂಲಕ ಬೆಂಗಳೂರು ತಲುಪಲಿದ್ದಾರೆ. ವಾಹನದಲ್ಲಿ ತಮಗೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಇಟ್ಟುಕೊಂಡು ಸಾಗುತ್ತಿದ್ದಾರೆ.
ಪ್ರತಿ ದಿನ 20 ಕಿಲೋ ಮೀಟರ್ ಸಾಗಿ, ರಾತ್ರಿ ವೇಳೆ ದೇವಸ್ಥಾನ, ಮಠದಲ್ಲಿ ವಾಸ್ತವ್ಯ ಇದ್ದು, ಬೆಳಗ್ಗೆ ಮತ್ತೆ ಪಾದಯಾತ್ರೆ ಪ್ರಾರಂಭಿಸುತ್ತಿದ್ದಾರೆ. ಸುಮಾರು 15 ದಿನಗಳ ಕಾಲ ಪಾದಯಾತ್ರೆ ನಡೆಸಲಿದ್ದು, ಅಂತಿಮವಾಗಿ ಅಪ್ಪುವಿನ ಸಮಾಧಿಗೆ ಪೂಜೆ ಸಲ್ಲಿಸಿ, ಶಿವರಾಜ್ ಕುಮಾರ್ ಹಾಗೂ ಅಪ್ಪು ಪತ್ನಿ ಅಶ್ವಿನಿ ಅವರನ್ನ ಭೇಟಿ ಮಾಡುವುದಾಗಿ ಧರೆಪ್ಪ ತಿಳಿಸಿದ್ದಾರೆ.