ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡಬೇಕು. ಕಾಂಗ್ರೆಸ್ ಈ ದೇಶಕ್ಕೆ ಒಂದು ಶಾಪವಾಗಿದೆ. ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ನನ್ನು ವಿಸರ್ಜಿಸುವಂತೆ ಗಾಂಧೀಜಿ ಹೇಳಿದ್ದರು ಎಂದು ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಬಾಗಲಕೋಟೆಯಲ್ಲಿ ಗುಡುಗಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪೂರ್ತಿ ಹತಾಶರಾಗಿದ್ದಾರೆ. ಹೀಗಾಗಿ ಆರ್ಎಸ್ಎಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ. ಆರ್ಎಸ್ಎಸ್ ದೇಶಭಕ್ತ ಸಂಘಟನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದೇಶಭಕ್ತರನ್ನು ತಯಾರು ಮಾಡುವಂತಹ ಕಾರ್ಖಾನೆ ಆರ್ಎಸ್ಎಸ್ ಆಗಿದೆ ಎಂದು ಅವರು ಹೇಳಿದರು.
ವಿಜಯಪುರ ಶಾಸಕ ಬಸವಗೌಡ ಪಾಟೀಲ ಯತ್ನಾಳ್ ಕಾಂಗ್ರೆಸ್ಗೆ ಸಂತೋಷವಾಗಿದೆ:ಆದ್ರೆ ಈ ಪಿಎಫ್ಐ ಸಂಘಟನೆ ದೇಶದಲ್ಲಿ ಹಿಂದೂಗಳ ಹತ್ಯೆ ಮಾಡುವುದು. ಹಿಂದೂ ನಾಯಕರ ಕೊಲೆ, ಲವ್ ಜಿಹಾದ್ ಮಾಡಬೇಕೆಂಬ ಕುತಂತ್ರಕ್ಕೆ ಸಾಕ್ಷಿಯಾಗಿದೆ. ಸುಮ್ಮನೆ ಯಾರು ನಿಷೇಧ ಹೇರುವಂತಹ ಕೆಲಸ ಮಾಡಿಲ್ಲ. ಅರಬ್ ದೇಶಗಳಿಂದ ಸಾವಿರಾರು ಕೋಟಿ ಈ ಚಟುವಟಿಕೆಗೆ ಬರುತ್ತಿರುವ ಬಗ್ಗೆ ದಾಖಲೆ ಸಿಕ್ಕಿದೆ. ಪಿಎಫ್ಐ ನಿಷೇಧ ಆಗಿದ್ದರಿಂದ ಕಾಂಗ್ರೆಸ್ಗೆ ಒಳಗಿನಿಂದಲೇ ಸಂತೋಷವಾಗಿದೆ ಎಂದು ಯತ್ನಾಳ್ ವ್ಯಂಗ್ಯವಾಡಿದರು.
ಕಾಂಗ್ರೆಸ್ನಿಂದ ಇನ್ನೊಂದು ಪಾಕಿಸ್ತಾನ ತಯಾರು: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ನ ಭಾರತ ಜೋಡೋ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಭಾರತ ಜೋಡೋ ಅನ್ನೋದಕ್ಕೆ ಕಾಂಗ್ರೆಸ್ಗೆ ನೈತಿಕತೆಯೇ ಇಲ್ಲ. ಪಾಕಿಸ್ತಾನ ಒಡೆದು ಕೊಟ್ಟವರು ಯಾರು? ಬಾಂಗ್ಲಾದೇಶ ಒಡೆದವ್ರು ಯಾರು? ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಭಾರತವನ್ನು ತೋಡೋ ಮಾಡುವ ಕೆಲಸ ಮಾಡಿದೆ. ಆದರೆ ಪಿಎಂ ಮೋದಿ ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದ 370ನೇ ವಿಧಿ ನಾವು ತೆಗೆದು ಹಾಕಿದ್ವಿ, ಭಾರತದ ಅವಿಭಾಜ್ಯ ಅಂಗ ಎಂದು ಹೇಳಿ ಡಿಕ್ಲೇರ್ ಮಾಡಿದ್ದೀವಿ. ಕಾಂಗ್ರೆಸ್ನವರು ಈ ದೇಶದಲ್ಲಿ ಇನ್ನೊಂದು ಪಾಕಿಸ್ತಾನ ತಯಾರು ಮಾಡಲು ಹೊರಟಿದ್ದಾರೆ.
ಜೋಡೋದಿಂದ ಬಿಜೆಪಿ ಹೆದರಿಲ್ಲ:ಕಾಂಗ್ರೆಸ್ ಭಾರತದ ಕಾಂಗ್ರೆಸ್ ಅಲ್ಲ. ಪಾಕಿಸ್ತಾನದ ಕಾಂಗ್ರೆಸ್ ಆಗಿ ಪರಿವರ್ತನೆ ಆಗಿದೆ. ಮುಸ್ಲಿಮರ ಅಭಿವೃದ್ಧಿ ಸಲುವಾಗಿ ಮಾತನಾಡ್ತಾರೆ. ಬಾಡಿಗೆ ಜನರನ್ನು ತಂದು ಹೋರಾಟ ಮಾಡ್ತಿದಾರೆ. ರಾಹುಲ್ ಎಂಬ ಅರೆಹುಚ್ಚ, ಅಪ್ರಬುದ್ಧ ವ್ಯಕ್ತಿ. ರಾಹುಲ್ ಪಿಎಂ ಆದ್ರೆ ಏನಾಗುತ್ತೆ ಅನ್ನೋದು ದೇಶದ ಜನರಿಗೆ ಗೊತ್ತಿದೆ. ಜೋಡೋದಿಂದ ಬಿಜೆಪಿ ಹೆದರಿಲ್ಲ. ಹಾಗಾಗಿ ಕಾಂಗ್ರೆಸ್ ಹತಾಶೆಗೊಂಡಿದೆ. ಇನ್ನೂ 20 ವರ್ಷ ಮೋದಿನೇ ಪ್ರಧಾನಿ ಆಗಿರ್ತಾರೆ ಎಂದು ಯತ್ನಾಳ್ ಕಿಡಿಕಾರಿದರು.
ಇದನ್ನೂ ಓದಿ:ನಿಷೇಧಿತ ಸಂಘಟನೆ ಸಿಮಿ ಹುಟ್ಟಿದ್ದು ವಿಜಯಪುರದಲ್ಲಿ, ಅದರ ಪ್ರತಿರೂಪ ಪಿಎಫ್ಐ, ಎಸ್ಡಿಪಿಐ: ಯತ್ನಾಳ್
ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ: ಇದೇ ಸಂದರ್ಭದಲ್ಲಿ ಸಿಬಿಐಯನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ತಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಇವ್ರು ಈ ದೇಶವನ್ನು ಲೂಟಿ ಮಾಡಿದ್ದಾರೆ. ಕನಕಪುರ ಪೂರ್ತಿ ಲೂಟಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಅಕ್ರಮ ಆಸ್ತಿ ಇದೆ. ನನ್ನ ಮೇಲೆ ರೇಡ್ ಮಾಡ್ತಾರಾ? 10 ಸಾರಿ ರೇಡ್ ಮಾಡಿದ್ರು, ನನ್ನ ಬಳಿ ಏನೂ ಸಿಗುವುದಿಲ್ಲ. ನೀವು ಕಳ್ಳತನ ಮಾಡಿದ್ದೀರಿ ಅದಕ್ಕೆ ಸಿಬಿಐನವರು ರೇಡ್ ಮಾಡ್ತಿದಾರೆ. ನಾವೇನು ಸಿದ್ದರಾಮಯ್ಯ ಮನೆ ಮೇಲೆ ರೇಡ್ ಮಾಡಿದ್ದೀವಾ? ಎಂದು ಪ್ರಶ್ನೆ ಮಾಡಿದರು.