ಬಾಗಲಕೋಟೆ: ಇನ್ಮೇಲೆ ತಾಲೂಕಿನಲ್ಲಿ ಹಫ್ತಾ, ಗಿಫ್ತಾ ಎಲ್ಲ ಬಂದ್, ಬಡವರು ವ್ಯಾಪಾರಸ್ತರ ಬಳಿ ಯಾರಾದರು ಹಣ ಕೇಳಿದರೆ ಸುಮ್ಮನೇ ಬಿಡೋದಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಕಂಠಿ ವೃತ್ತದಲ್ಲಿ ಶಾಸಕರಿಗೆ ಅಭಿನಂದನೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸನ್ಮಾನ ಮಾಡಿದ ನಂತರ ವೇದಿಕೆಯಲ್ಲಿ ಭಾಷಣ ಮಾಡಿದ ಅವರು, ಯಾವನಾದ್ರೂ ಬಡವರ ಹತ್ತಿರ, ಬೀದಿ ವ್ಯಾಪಾರಸ್ಥರ ಹತ್ತಿರ, ಚಹಾ ಅಂಗಡಿ, ಢಾಬಾದವರ ಹತ್ತಿರ ಒಂದು ರೂಪಾಯಿ ಕೇಳಿದರೂ, ನಿಮ್ಮನ್ನ ವಿಜಯಾನಂದ ಕಾಶಪ್ಪನವರ ಸುಮ್ಮನೇ ಬಿಡೋದಿಲ್ಲ. ನೊ ಹಫ್ತಾ, ನೊ ಗಿಫ್ತಾ ಎಲ್ಲಾ ಬಂದ್, ಖೇಲ್ ಖತಂ..ನಾಟಕ ಬಂದ್..ಎಂದು ಎಚ್ಚರಿಕೆ ನೀಡಿದರು.
ಬಳಿಕ ಮಾಜಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ, ನಾವು ಇಳಕಲ್ ನಗರ ಅಭಿವೃದ್ಧಿ ಮಾಡಿದ್ದೇವೆ. 24 ತಾಸು ನೀರನ್ನೂ ತಂದಿದ್ದೇವೆ, ಒಳಚರಂಡಿ ಮಾಡಿದ್ದೇವೆ, ಸಿಸಿ ರಸ್ತೆಗಳನ್ನ ಮಾಡಿದ್ದೇವೆ, ಬಡವರಿಗೆ ಮನೆ ಕೊಟ್ಟಿದ್ದೀವಿ, 42 ಎಕರೆ ಭೂಮಿ ತಗೊಂಡು, 1,560 ಪ್ಲಾಟ್ ಮಾಡೇವಿ. ನೀವೇನು ಮಾಡಿರಪ್ಪಾ? ಎಂದು ಮಾಜಿ ಶಾಸಕರಿಗೆ ಪ್ರಶ್ನಿಸಿದ ಅವರು, ಬಡವರಿಗೆ ಮನೆ ಕಟ್ಟಿಸಿದ ಇತಿಹಾಸ ಇದೆಯಾ, ಇಲ್ಲಿದ್ದ ಪ್ಲಾಟ್ಗಳಲ್ಲಿ ಮನೆ ಕಟ್ಟಿಸಿ ಹಕ್ಕು ಪತ್ರಕೊಟ್ಟಿದ್ರೆ ಇಂದು ಜನರು ನಿಮ್ಮನ್ನು ನೆನೆಯುತ್ತಿದ್ದರು ಎಂದು ಮಾಜಿ ಶಾಸಕರಿಗೆ ಟಾಂಗ್ ನೀಡಿದರು. ಇದೇ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ವಾಗ್ದಾಳಿ:ಇನ್ನು ಸಿಟಿ ರವಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಕೇಂದ್ರದ ಒಪ್ಪಿಗೆ ಆಧಾರದ ಮೇಲೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೇವು. ಆದರೀಗಾ ಕೇಂದ್ರ ಸರ್ಕಾರ ಉಲ್ಟಾ ಹೊಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಸುಳ್ಳು ರಾಮಯ್ಯ ಅಲ್ಲಾ ಎನ್ನುವುದಾದರೆ ಎಫ್‌ಸಿಐ ಕಮಿಟ್ಮೆಂಟ್ ಲೆಟರ್ ತೋರಿಸಲಿ ಎಂದು ಸವಾಲೊಡ್ಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪದ ಬಗ್ಗೆ ಮಾತನಾಡಿರುವ ಅವರು, "ಸುಖಾ ಸುಮ್ಮನೆ ಆರೋಪ ಮಾಡುವುದು ಬಿಟ್ಟು ಜನರಿಗೆ ಅಕ್ಕಿ ಬದಲು ಹಣ ಕೊಡಿ, ಅವರೇ ಅಕ್ಕಿ ತೆಗೆದುಕೊಳ್ಳುತ್ತಾರೆ. ಈ ವಿಚಾರವಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿರುವ ಸಿದ್ದರಾಮಯ್ಯ ಕಮಿಟ್ಮೆಂಟ್ ಪತ್ರ ತೋರಿಸಲಿ ಎಂದು ಹೇಳಿದರು.
ಎಫ್.ಸಿ.ಐ. ನಿಮಗೆ ಅಗತ್ಯವಿರುವ ಅಕ್ಕಿಯನ್ನು ಕಳಿಸುತ್ತೇವೆ ಎಂದು ಹೇಳಿದ್ದಾರಾ?. ತಮ್ಮ ಕೈಯ್ಯಲ್ಲಿ ಆಗದಿರುವುದಕ್ಕೆ ಕೇಂದ್ರದ ಮೇಲೆ ಆರೋಪ ಮಾಡುವುದು ಈಗಲೇ ಶುರು ಮಾಡಿದ್ದೀರಾ. ಸಿದ್ದರಾಮಯ್ಯ ನಾಲ್ಕು ಐದು ತಿಂಗಳ ನಂತರ ಈ ರೀತಿಯ ಆರೋಪ ಮಾಡುತ್ತಾರೆ ಎಂದು ಈ ಮೊದಲೇ ನಾನು ಭಾವಿಸಿದ್ದೆ. ಆದರೆ, ಈಗಲೇ ಆರೋಪ ಮಾಡುವುದನ್ನು ಶುರು ಮಾಡಿದ್ದಾರೆ. ಎಲ್ಲ ಬಿ.ಪಿ.ಎಲ್. ಕಾರ್ಡ್ದಾರರ ಖಾತೆಗೆ ಹಣ ಹಾಕಿದರೇ ಅವರೇ ಅಕ್ಕಿ ಕೊಂಡುಕೊಳ್ಳುತ್ತಾರೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಸುಳ್ಳು ರಾಮಯ್ಯ ಅಲ್ಲದಿದ್ದರೆ ಎಫ್‌ಸಿಐ ಕಮಿಟ್ಮೆಂಟ್ ಪತ್ರ ತೋರಿಸಲಿ: ಸಿಟಿ ರವಿ ವಾಗ್ದಾಳಿ