ಬಾಗಲಕೋಟೆ :ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸ್ ಕಂಡಕ್ಟರ್ ಮುರಗೇಶ ಹುಲ್ಲಳ್ಳಿಯವರನ್ನು, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಮರೋಳ ಗ್ರಾಮದ ಬಳಿ ಕಳೆದ ರಾತ್ರಿ ಬಸ್ ಕಂಡಕ್ಟರ್ ಮುರಗೇಶ ಹುಲ್ಲಳ್ಳಿ ಎಂಬುವವರು ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಜನರ ಗುಂಪು ಬಂದು, ಬಸ್ ನಿಲ್ಲಿಸಿ ಖಾರದ ಪುಡಿ ಎರಚಿ ಮಾರಣಾಂತಿಕ ಹಲ್ಲೆ ಮಾಡಿತ್ತು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಕಂಡಕ್ಟರ್ನನ್ನು ನಗರದ ಕೆರೂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಇಂದು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುರಗೇಶ ಹುಲ್ಲಳ್ಳಿ ಮಾತನಾಡಿ, ಘಟನೆ ನಡೆದಿರುವ ಬಗ್ಗೆ ವಿವರ ನೀಡಿದರು.
ಹಲ್ಲೆಗೊಳಗಾಗಿದ್ದ ಬಸ್ ಕಂಡಕ್ಟರ್ ಆರೋಗ್ಯ ವಿಚಾರಿಸಿದ ವಿಜಯಾನಂದ ಕಾಶಪ್ಪನವರ ನಂತರ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಕರ್ತವ್ಯದ ಮೇಲೆ ಇದ್ದ ಕಂಡಕ್ಟರ್ಗೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ. ಶಾಸಕರ ಹೆಸರು ಹೇಳಿಕೊಂಡು ಗುಂಡಾಗಿರಿ ಮಾಡುತ್ತಿರುವ ಇಂತಹವರ ಮೇಲೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈಗಾಗಲೇ 12 ಜನರ ಮೇಲೆ ದೂರು ದಾಖಲಾಗಿದ್ದು, ಇದುವರೆಗೂ ಪೊಲೀಸರು ಯಾರನ್ನು ಬಂಧನ ಮಾಡಿಲ್ಲ, ಪೊಲೀಸ್ ಅಧಿಕಾರಿಗಳು ಸಹ ಶಾಸಕರ ಕೈ ಗೊಂಬೆ ಆಗಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ, ಉಗ್ರ ಸ್ವರೂಪದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.