ಬಾಗಲಕೋಟೆ:ಬಿಜೆಪಿ ಪಕ್ಷದ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಕುಮ್ಮಕ್ಕಿನಿಂದಾಗಿಯೇ ಪೊಲೀಸರು ತಮ್ಮನ್ನು ಬಂಧನ ಮಾಡಲು ಬಂದಿದ್ದರು. ಧೈರ್ಯ ಇದ್ದರೆ ನನ್ನನ್ನು ಬಂಧಿಸಲಿ ನೋಡೋಣ ಎಂದು ಮತ್ತೆ ಸವಾಲು ಹಾಕಿದರು.
ಧೈರ್ಯ ಇದ್ದರೆ ನನ್ನನ್ನು ಬಂಧಿಸಲಿ ನೋಡೋಣ: BJP ಶಾಸಕನಿಗೆ ಸವಾಲು ಹಾಕಿದ ಕಾಶಪ್ಪನವರ್ - Vijayanand Kashappanavar allegation
ತಮ್ಮ ವಿರುದ್ಧ ಅರೆಸ್ಟ್ ವಾರೆಂಟ್ ತಂದಿದ್ದ ಪೊಲೀಸ್ ವಿರುದ್ಧ ವಾಗ್ದಾಳಿ ಮಾಡುವ ಮೂಲಕ ಚರ್ಚೆಯ ಮುನ್ನೆಲೆಗೆ ಬಂದಿದ್ದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಇಂದು ಈ ಪ್ರಕರಣಕ್ಕೆ ಕಾರಣ ಯಾರೆಂದು ಬಹಿರಂಗಪಡಿಸಿದ್ದಾರೆ.
ಇಂದು ಇಳಕಲ್ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹುನಗುಂದ ಮತ ಕ್ಷೇತ್ರದಲ್ಲಿ ಬಡವರಿಗೆ ಆಶ್ರಯ ಮನೆ ನೀಡುವಲ್ಲಿ ಭ್ರಷ್ಟಾಚಾರ ಸೇರಿದಂತೆ ಗೂಂಡಾಗಿರಿ, ದಬ್ಬಾಳಿಕೆ ಹಾಗೂ ಬಡ್ಡಿ ವ್ಯವಹಾರ ನಡೆಯುತ್ತಿದೆ ಎಂದು ಆರೋಪ ಮಾಡಿದರು.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಕೋವಿಡ್ ನೆಪದಲ್ಲಿ ಅಭಿವೃದ್ಧಿ ಕಾಮಗಾರಿ ನಿಂತಿದೆ ಎಂದು ಶಾಸಕ ದೊಡ್ಡಗೌಡ ಪಾಟೀಲ್ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ಈ ಮತಕ್ಷೇತ್ರದಲ್ಲಿ ಶಾಸಕ ಹಾಗೂ ಅವರ ಪುತ್ರ ಪೊಲೀಸರನ್ನು ಬಳಿಸಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆಶ್ರಯ ಮನೆ ನೀಡುವ ಅವ್ಯವಹಾರ ಸೇರಿದಂತೆ ತಾಲೂಕಿನ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತ ಪ್ರದರ್ಶನ ಮಾಡುತ್ತೇನೆ ಎಂದು ಶಾಸಕರಿಗೆ ಸವಾಲು ಹಾಕಿದರು.