ಬಾಗಲಕೋಟೆ:ಬಿಜೆಪಿ ಸರ್ಕಾರ ಪರ್ಸಂಟೇಜ್ ಜೊತೆಗೆ ಕೊರೊನಾದಲ್ಲಿ ಲೂಟಿ ಹೊಡೆಯುವ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಹಾಗೂ ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ್ ನವನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಕೊರೊನಾ ಸಮಯದಲ್ಲಿ ರೋಗಿಗಳ ಬಗ್ಗೆ ಚಿಂತನೆ ಮಾಡುವ ಬದಲು ಬಿಜೆಪಿ ಸರ್ಕಾರ ಲೂಟಿ ಹೊಡೆಯುವ ಕೆಲಸದಲ್ಲಿ ನಿರತವಾಗಿದೆ. ಬಾಗಲಕೋಟೆ ಲೋಕಸಭಾ ಸಂಸದರು ಇಂತಹ ಸಮಯದಲ್ಲಿ ಜನಗಳ ಮಧ್ಯೆ ಇದ್ದು, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಯಾರೂ ಕೊಡುವ ಸಾಮಗ್ರಿಗಳ ವಿತರಣೆ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ನಾಲ್ಕು ಭಾರಿ ಸಂಸದರಾಗಿ ತಮ್ಮ ಸ್ವಂತ ವೆಚ್ಚದಲ್ಲಿ ಯಾರಿಗೆ ಸಹಾಯ ಸಹಕಾರ ಮಾಡಿದ್ದಾರೆ ಎಂಬುದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ನಾವು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕಿನಲ್ಲಿ ಕೊರೊನಾ ಸೋಂಕಿತರಿಗೆ ಔಷಧ ಕಿಟ್ ವಿತರಿಸಿದ್ದೇವೆ. ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸರ್ ಯಂತ್ರ ನೀಡಲಾಗಿದೆ. ಆದರೆ ಇಲ್ಲಿನ ಸಂಸದರು, ವ್ಯಾಕ್ಸಿನ್ ಸಿಗುವಂತೆ ಕೇಂದ್ರ ಜೊತೆಗೆ ಏನು ಸಂಪರ್ಕ ಮಾಡಿದ್ದಾರೆ. ಬ್ಲಾಕ್ ಫಂಗಸ್ ಔಷಧ, ಚುಚ್ಚುಮದ್ದಿಗಾಗಿ ರೋಗಿಗಳ ಸಮಸ್ಯೆ ಬಗೆಹರಿಸುವಲ್ಲಿ ಏನು ಕಾರ್ಯ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರ ಎಲ್ಲಾ ಆಸ್ಪತ್ರೆಗಳಿಗೆ ಸಿಸಿಟಿವಿ ಅಳವಡಿಸಿ, ಕೊರೊನಾ ಸೋಂಕಿತರ ವಿಡಿಯೋ ಮೂಲಕ ಅವರ ಸಮಸ್ಯೆ ತಿಳಿದು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಇಲ್ಲವಾದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ಸಿಸಿಟಿವಿ ಅಳವಡಿಸಿ ಮಾಹಿತಿ ಪಡೆಯುವ ಕಾರ್ಯ ಮಾಡಬೇಕಾಗುತ್ತದೆ ಎಂದು ತಿಳಿಸಿದರು.