ಬಾಗಲಕೋಟೆ:ಅಕಾಲಿಕ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ರೋಗ ತಗುಲಿ ರೈತರು ಕಂಗಲಾಗಿದ್ದಾರೆ. ಕಳೆದ ವಾರದ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಿಂದ ದ್ರಾಕ್ಷಿ ಬೆಳೆಗೆ ಕೊಳೆ ರೋಗ ತಗುಲುತ್ತಿದೆ.
ಅಕಾಲಿಕ ಮಳೆಯಿಂದ ದ್ರಾಕ್ಷಿಗೆ ಬಂದಿರುವ ಬೂದಿ ಹಾಗು ಬುರಿ ರೋಗಗಳಿಂದ ಬೆಳೆ ಕಾಪಾಡಲು ರೈತರು ಹರಸಾಹಸ ಪಡುತ್ತಿದ್ದಾರೆ. ಔಷಧ ಸಿಂಪಡಿಸಿದರೂ ಪ್ರಯೋಜನವಾಗುತ್ತಿಲ್ಲ. ಸಾಲ ಮಾಡಿಕೊಂಡು ದ್ರಾಕ್ಷಿ ಬೆಳೆದು ಈ ಬಾರಿ ಫಸಲು ಬರುತ್ತದೆ ಎಂಬ ನಿರೀಕ್ಷೆ ಮಳೆಯಿಂದಾಗಿ ಹುಸಿಯಾಗುವ ಆತಂಕ ಎದುರಾಗಿದೆ.
ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗೆ ಬೂದಿ ರೋಗ ಕೊರೊನಾದಿಂದ ಎರಡು ವರ್ಷ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಅಕಾಲಿಕ ಮಳೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸತತ 4 ವರ್ಷಗಳಿಂದ ದ್ರಾಕ್ಷಿ ಬೆಳೆಗಾರ ಹಾನಿಯಿಂದ ತತ್ತರಗೊಂಡಿದ್ದಾನೆ.
ಜಿಲ್ಲೆಯ ರಬಕವಿ - ಬನಹಟ್ಟಿ ತಾಲೂಕಿನ ಜಗದಾಳ, ನಾವಲಗಿ, ಹಿಪ್ಪರಗಿ ಹಾಗೂ ಚಿಮ್ಮಡ ಗ್ರಾಮಗಳ ಸುತ್ತ ಸುಮಾರು 600 ಎಕರೆಯಷ್ಟು ದ್ರಾಕ್ಷಿ ಬೆಳೆದಿರುವ ರೈತರ ತೋಟಕ್ಕೆ ಯಾವುದೇ ಅಧಿಕಾರಿಗಳು ಬಾರದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.