ಬಾಗಲಕೋಟೆ: ನವೆಂಬರ್ 9ರಂದು ನಡೆದ ಮಹಾಲಿಂಗಪೂರ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ವೇಳೆ ಮಹಿಳಾ ಸದಸ್ಯೆ ಮೇಲೆ ಅಸಭ್ಯವಾಗಿ ವರ್ತಿಸಿದ್ದ ಬಿಜೆಪಿ ಶಾಸಕ ಸಿದ್ದು ಸವದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವೆ ಉಮಾ ಶ್ರೀ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 9ರಂದು ತೇರದಾಳ ಕ್ಷೇತ್ರದ ಬನಹಟ್ಟಿ, ಮಹಾಲಿಂಗಪೂರ ಎರಡು ಪುರಸಭೆಯಲ್ಲಿ ಚುನಾವಣೆ ನಡೆದಿದ್ದವು. ಈ ಚುನಾವಣೆಯಲ್ಲಿ ಭಾಗಿಯಾಗಲು ಎಲ್ಲ ಪಕ್ಷದ ಕಾರ್ಯಕರ್ತರು ಹೊರಟಿದ್ದರು. ಈ ನಡುವೆ ಮತಹಾಕಲು ಹೊರಟಿದ್ದ ಸದಸ್ಯರಾದ ಚಾಂದಿನಿ ನಾಯಕ್, ಗೋದಾವರಿ ಬಾಟ್, ಸುಜಾತಾ ಮಾಂಗ, ಹುರಕಡ್ಲಿ ಅವರನ್ನು ತಡೆಯಲು ಸಿದ್ದು ಸವದಿ ಮತ್ತು ಬೆಂಬಲಿಗರು ಯತ್ನಿಸಿದ್ದಾರೆ ಎಂದು ಹೇಳಿದರು.
ಓದಿ:ಮಹಿಳೆ ಮೇಲೆ ನಡೆದ ದೌರ್ಜನ್ಯಕ್ಕೆ ಮಾಜಿ ಸಚಿವೆ ಉಮಾಶ್ರೀ ನೇರ ಕಾರಣ: ಸಿದ್ದು ಸವದಿ ಆರೋಪ
ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಮಗೆ ವ್ಯತಿರಿಕ್ತವಾಗಿ ಮತ ಹಾಕಬಹುದು ಎಂಬ ಭಯದಿಂದ ಎಳೆದಾಡಿ ದೈಹಿಕ ಹಿಂಸೆ ನೀಡಿದ್ದಾರೆ. ಸಾರ್ವಜನಿಕ ಹಕ್ಕುಗಳನ್ನು ರಕ್ಷಣೆ ಮಾಡುವ ಶಾಸಕ ಸಿದ್ದು ಸವದಿ ಕೃತ್ಯ ಖಂಡನೀಯ. ಆ ಪುರಸಭೆ ಸದಸ್ಯರು ತಮಗೆ ಯಾರಿಗೆ ಬೇಕು ಅವರಿಗೆ ಮತ ಹಾಕುತ್ತಿದ್ದರು. ಅದು ಅವರ ಹಕ್ಕು. ಈ ಘಟನೆ ನಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಮಾನವೀಯವಾಗಿದೆ. ವಿಪರ್ಯಾಸವೆಂದರೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಅಷ್ಟು ಜನ ಜಮಾಯಿಸಿದ್ದು ಹೇಗೆ ಎಂದು ಉಮಾ ಶ್ರೀ ಪ್ರಶ್ನಿಸಿದರು.