ಬಾಗಲಕೋಟೆ: ರಾಮಮಂದಿರ ತೀರ್ಪಿಗೆ ಕಾಯುತ್ತಿದ್ದೇವೆ. ಶ್ರೀ ರವಿಶಂಕರ್ ಗುರೂಜಿಯವರ ಕರೆ ಬಂದಿತ್ತು. ಸಂಧಾನ ಯಶಸ್ವಿಯಾಗಿದೆ ಅಂತಾ ಹೇಳಿದ್ದಾರೆ. ಮುಸ್ಲಿಂ ಸಮುದಾಯದ ಕೆಲವರು ಸಂಧಾನಕ್ಕೆ ಒಪ್ಪಿಗೆ ಇಲ್ಲ ಅಂತಾ ಹೇಳಿದ್ದಾರೆ. ಸಂಧಾನದಿಂದಲೇ ಸಮಸ್ಯೆ ಸರಿಯಾದರೆ ಒಳಿತು ಎಂದು ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಸ್ವಾಮೀಜಿ ಹೇಳಿದರು.
ಉಡುಪಿ ಶ್ರೀ ಕೃಷ್ಣ ಮಠದ ಪೇಜಾವರ ಸ್ವಾಮೀಜಿ.. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಮಸೀದಿಯನ್ನ ಎಲ್ಲಿಯಾದರೂ ಮಾಡಬಹುದು, ಜನ್ಮಭೂಮಿಯನ್ನ ಬದಲಾಯಿಸಲು ಆಗಲ್ಲ. ಕೆಲ ಮುಸ್ಲಿಂ ಮುಖಂಡರು ಸಂಧಾನಕ್ಕೆ ಒಪ್ಪಿಗೆಯಿಲ್ಲ ಅಂದಿದ್ದು, ಗೊಂದಲವಾಗಿದೆ. ಹೀಗಾಗಿ ಸುಪ್ರೀಂ ತೀರ್ಪಿಗಾಗಿ ಕಾಯುತ್ತಿದ್ದೇವೆ. ಕೋರ್ಟ್ ಹೊರಗೆ ಸಂಧಾನದಿಂದ ಸಮಸ್ಯೆ ಸರಿಯಾಗೋದೆ ನಮಗೆ ಇಷ್ಟ, ಇದರಿಂದ ಭಾವೈಕ್ಯತೆ ಬೆಳೆಯುತ್ತದೆ ಎಂದರು.
ವೀರ ಸಾವರ್ಕರ್ಗೆ ಭಾರತರತ್ನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶ್ರೀಗಳು, ವೀರ ಸಾವರ್ಕರ್ ಸ್ವಾತಂತ್ರ ಹೋರಾಟಕ್ಕೆ ಸ್ಫೂರ್ತಿ ಕೊಟ್ಟವರು. ಬಂಧನಕ್ಕೊಳಗಾದಾಗ ಸಮುದ್ರಕ್ಕೆ ಹಾರಿ ಬ್ರಿಟೀಷರಿಂದ ತಪ್ಪಿಸಿಕೊಂಡವರು. ಅಂತಹ ದೇಶ ಭಕ್ತರ ಬಗ್ಗೆ ಇಲ್ಲದ ಮಾತನಾಡಬಾರದು. ವಿವಾದಾತ್ಮಕ ಕೆಲಸ ಮಾಡಿರೋ ಟಿಪ್ಪು ಸುಲ್ತಾನ್ ಅಂತವರಿಗೆ ಗೌರವ ಕೊಡುತ್ತಾರೆ. ಟಿಪ್ಪು ವಿರುದ್ದ ಕೊಡವರು, ಕೇರಳದವರು ಭಾರಿ ಅಸಮಾಧಾನ ಹೊಂದಿದ್ದಾರೆ. ವೀರ ಸಾವರ್ಕರ್ ವಿವಾದಾತೀತ ವ್ಯಕ್ತಿ. ಅಂತವರ ಬಗ್ಗೆ ಅಗೌರವ ಸಲ್ಲಿಸೋದು ಒಳ್ಳಯದಲ್ಲ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ಗೆ ನೋಟಿಸ್ ನೀಡಿರುವ ವಿಚಾರವಾಗಿ, ಯತ್ನಾಳ್ ಕೆಟ್ಟ ಉದ್ದೇಶದಿಂದ ಹೇಳಿಲ್ಲ, ಸಂತ್ರಸ್ತರಿಗೆ ಪರಿಹಾರ ನೀಡಲಿ ಎಂದು ಹೇಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ನಾನು ಬಿಜೆಪಿಗೆ ಪತ್ರ ಬರೆಯುತ್ತೇನೆ ಎಂದು ತಿಳಿಸಿದರು.