ಬಾಗಲಕೋಟೆ/ಬೆಳಗಾವಿ/ಚಾಮರಾಜನಗರ:ಓವರ್ ಟೇಕ್ ಮಾಡುವ ಭರದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮುಧೋಳ ತಾಲೂಕಿನ ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ಸಂಭವಿಸಿದೆ. ಗೋವಿಂದ್ ಪಾಟೀಲ್ (20) ಹಾಗೂ ಹನಮಂತ್ ಬೊಮ್ಮಕ್ಕನವರ್ (20) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹನುಮಂತ ಹುನಸಿಕಟ್ಟಿ ಎಂಬುವರ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿದೆ. ಒಟ್ಟಿಗೆ ತೆರಳುತ್ತಿದ್ದ ಎರಡು ಟ್ರ್ಯಾಕ್ಟರ್ ಚಾಲಕರು ಓವರ್ ಟೇಕ್ ಮಾಡಲು ಯತ್ನಿಸಿ ದುರಂತ ಸಂಭವಿಸಿದೆ.
ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಆಗ ಮುಂದಿನ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಇಬ್ಬರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮುಧೋಳ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಾಲಯದಿಂದ ವಾಪಸ್ ಬರುವಾಗ ಘಟನೆ ಸಂಭವಿಸಿದೆ. ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಯುವಕನ ಕೊಲೆ:ನಡುರಸ್ತೆಯಲ್ಲಿ ಯುವಕನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಡತರವಾಡಿ ಗ್ರಾಮ ಹೊರವಲಯದಲ್ಲಿ ನಡೆದಿದೆ. ಕೋಹಳ್ಳಿ (ಬಾವನಡ್ಡಿ) ಗ್ರಾಮದ ಕುಮಾರ ಮರಗಾಲೆ (48) ಕೊಲೆಯಾದ ವ್ಯಕ್ತಿ. ಪಡತರವಾಡಿ - ಕನಾಳ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಪ್ರವಾಸದ ಟ್ರ್ಯಾಕ್ಟರ್ ಅಪಘಾತ: ಪ್ರವಾಸಕ್ಕೆ ತೆರಳಿದ್ದ ಕಾಲೇಜು ವಿದ್ಯಾರ್ಥಿಗಳ ಟ್ರ್ಯಾಕ್ಟರ್ ಪಲ್ಟಿಯಾಗಿ 25ಕ್ಕೂ ಅಧಿಕ ವಿದ್ಯಾರ್ಥಿನಿಯರು ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿಯ ಕೊಳಗಿಯಲ್ಲಿ ನಡೆದಿದೆ. ಮಳಗಿಯ ಪದವಿ ಪೂರ್ವ ಕಾಲೇಜಿನ 45 ವಿದ್ಯಾರ್ಥಿನಿಯರಿದ್ದ ಟ್ರ್ಯಾಕ್ಟರ್ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ 8 ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಶಿರಸಿ ಪಂಡಿತ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪೂಜೆ ಮಾಡುತ್ತಿದ್ದ ದೇಗುಲದಲ್ಲೇ ಕಳ್ಳತನ:ತಾನು ಪೂಜೆ ಮಾಡುತ್ತಿದ್ದ ದೇವಾಲಯದಲ್ಲೇ ಅರ್ಚಕ ಹಾಗೂ ಆತನ ಗ್ಯಾಂಗ್ ಕಳವು ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದಿದೆ. ದೇವಾಲಯದ ಅರ್ಚಕ ಸಿದ್ದೇಗೌಡ ಹಾಗೂ ಈತನ ಸ್ನೇಹಿತರಾದ ಕಿರಣ್, ಚೇತನ್ ಹಾಗೂ ಸಿದ್ದರಾಜು ಬಂಧಿತ ಆರೋಪಿಗಳಾಗಿದ್ದಾರೆ. ಗ್ರಾಮದ ಅಂಕಾಳಪರಮೇಶ್ವರಿ ದೇವಾಲಯದಲ್ಲಿ ಸಿದ್ದೇಗೌಡ ಅರ್ಚಕನಾಗಿದ್ದು, ಈತ ತನ್ನ ಸ್ನೇಹಿತರ ಜೊತೆ ಸೇರಿ ಗೋಲಕ ಕಳವು ಮಾಡುವಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗಿದ್ದಾನೆ. ಬಂಧಿತರಿಂದ 9,800 ರೂ. ಹಣ, ಬೈಕ್ ವಶಪಡಿಸಿಕೊಂಡಿದ್ದು, ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.