ಕರ್ನಾಟಕ

karnataka

ETV Bharat / state

ಒಂದೇ ಕುಟುಂಬದ ಮೂವರು ಮಕ್ಕಳಿಗೆ ಅಂಗವಿಕಲತೆ.. ಸಹಾಯಕ್ಕೆ ಎದುರು ನೋಡುತ್ತಿದೆ ಬಡ ಕುಟುಂಬ! - undefined

ಒಂದೇ ಕುಟುಂಬದ ಮೂವರು ಮಕ್ಕಳು ಅಂಗವಿಕಲತೆಯಿಂದ ಬಳಲುತ್ತಿದ್ದು, ಆರ್ಥಿಕ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಸಹಾಯಕ್ಕೆ ಎದುರು ನೋಡುತ್ತಿದೆ ಬಡ ಕುಟುಂಬ

By

Published : Mar 30, 2019, 3:48 AM IST

ಬಾಗಲಕೋಟೆ:ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಇದರ ಮಧ್ಯೆ ಇರುವ ನಾಲ್ವರು ಪುತ್ರರಲ್ಲಿ ಮೂವರಿಗೆ ಅಂಗವಿಕಲತೆ ಹಾಗು ಬುದ್ದಿಮಾಂದ್ಯತೆ ಈ ಕುಟುಂಬಕ್ಕೆ ಮಾರಕವಾಗಿದ್ದು, ವೈದ್ಯಕೀಯ ಚಿಕಿತ್ಸೆಯೂ ಗಗನ ಕುಸುಮವಾಗಿದೆ.

ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ವಾರ್ಡ್ ನಂ.8 ರಲ್ಲಿನ ಜಿಡ್ಡಿಮನಿ ತೋಟದ ಶಾಲೆ ಹತ್ತಿರವಿರುವ ಶಿಂಗಾಡೆಪ್ಪ ಹಾಗು ಶಾನವ್ವ ಜಿಡ್ಡಿಮನಿ ಎಂಬುವರಿಗೆ ನಾಲ್ವರು ಮಕ್ಕಳು. ನಾಲ್ವರಲ್ಲಿ ಮೂರನೇಯ ಗಂಡು ಮಗು ಮಾತ್ರ ಬುದ್ದಿಮಟ್ಟದಲ್ಲಿ ಅಲ್ಪಸ್ವಲ್ಪ ಸದೃಢವಾಗಿದ್ದು, ಇನ್ನುಳಿದ ಮೂವರು ಗಂಡು ಮಕ್ಕಳಾದ ಲಕ್ಕಪ್ಪ(11), ರಾಮಪ್ಪ(09), ತುಕ್ಕಪ್ಪ(06) ಅಂಗವಿಕಲತೆ ಮತ್ತು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ.

ಮೂವರು ಮಕ್ಕಳಿಗೂ ಚರ್ಮರೋಗ ಸಮಸ್ಯೆ ಎದುರಾಗಿದ್ದು, ಕೇವಲ ಒಂದು ಎಕರೆ ಭೂಮಿಯನ್ನು ಹೊಂದಿರುವ ಜಿಡ್ಡಿಮನಿ ಕುಟುಂಬಕ್ಕೆ ವಾರ್ಷಿಕ ಆದಾಯವಾಗಿದೆ. ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದ ಎಲ್ಲಿಯೂ ತೆರಳದೆ ಮನೆಯಲ್ಲಿಯೇ ತಮ್ಮ ಸಂಕಷ್ಟವನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ.

ತೋಟದ ಗುಡಿಸಲೊಂದರಲ್ಲಿ ವಾಸಿಸುತ್ತಿರುವ ಈ ಮಕ್ಕಳ ಪಾಡು ಹೇಳಲಾಗದು. ಮೂರೂ ಮಕ್ಕಳು ನಿತ್ಯ ನರಕ ಅನುಭವಿಸುತ್ತಿವೆ. ಓರ್ವ ಮಗು ಎದ್ದು ಎರಡು ಹೆಜ್ಜೆಯಿಡುವಷ್ಟರಲ್ಲಿ ಜೋಲಿ ಹೋಗಿ ನೆಲಕ್ಕೆ ಬೀಳುವುದು. ಮತ್ತೊಂದು ಮಗು ಕುಳಿತಲ್ಲಿಯೇ ತನ್ನ ನಗು ಚೆಲ್ಲುವದನ್ನು ನೋಡಿದರೆ ಎಂಥವರ ಮನಸ್ಸು ಕರಗುತ್ತದೆ.

ಸಹಾಯಕ್ಕೆ ಎದುರು ನೋಡುತ್ತಿದೆ ಬಡ ಕುಟುಂಬ
ಹುಟ್ಟಿದಾಗಿನಿಂದ ವಿಕಲಚೇತನರು:
ಜಿಡ್ಡಿಮನಿ ಕುಟುಂಬದ ಶಿಂಗಾಡೆಪ್ಪ ಈತನ ಪತ್ನಿ ಶಾನವ್ವರಿಗೆ ಈ ಮೂವರು ಮಕ್ಕಳು ಹುಟ್ಟಿದಾಗಿನಿಂದಲೇ ಅಂಗವಿಕಲತೆ ಎದುರಾಗಿದೆ. ಚಿಕಿತ್ಸೆಗೆಂದು ಕೆಲ ಆಸ್ಪತ್ರೆ ವೈದ್ಯರನ್ನು ಭೇಟಿ ಮಾಡಿದ್ದಾಗಿದೆ. ಸಮರ್ಪಕವಾದ ಸಹಕಾರ ದೊರಕದೆ ಹೊಲ-ಗದ್ದೆಗಳ ಕೆಲಸದಲ್ಲಿಯೇ ತೊಡಗಿಕೊಂಡು ಮಕ್ಕಳ ಅಂಗವಿಕಲತೆ ನಮಗೆ ಶಾಪವಾಗಿದೆ ಎಂದು ಬದುಕು ನಿರ್ವಹಿಸುತ್ತಿದ್ದೇವೆ ಎಂದು ಹೇಳುತ್ತಾರೆ.

ನಿತ್ಯ ಅಜ್ಜಿಯ ಕಾಯಕ:
ಈ ಮಕ್ಕಳಿಗೆ ಇವರ ಅಜ್ಜಿ ತಂಗೆವ್ವಳೇ ಆರೈಕೆ ಮಾಡುತ್ತಾಳೆ. ಬೆಳಗಿನ ಶೌಚ ಕಾರ್ಯದಿಂದ ಮಲಗುವವರೆಗೂ ಉಪಚಾರ ಮಾಡುತ್ತಾರೆ. ಇದೇ ಇವರ ನಿತ್ಯ ಕಾಯಕ. ಮಕ್ಕಳ ತಂದೆ-ತಾಯಿ ದುಡಿಯಲು ಕೆಲಸಕ್ಕೆಂದು ಹೊಲ-ಗದ್ದೆಗೆ ತೆರಳದಿದ್ದರೆ ಉಪವಾಸವೇ ಗತಿ. ಹೀಗಿರುವಾಗ ಬಡತನದಲ್ಲಿ ಬೆಂದು ಹೋಗಿರುವ ಈ ಕುಟುಂಬಕ್ಕೆ ಚಿಕಿತ್ಸೆ ಎಂಬುದು ಒಂದು ಸವಾಲಾಗಿದೆ.

ಈ ಕುಟುಂಬಕ್ಕಿಲ್ಲ ಸರ್ಕಾರದ ಆಸರೆ:
ಸರ್ಕಾರದಿಂದ ಪ್ರತಿ ವಿಕಲಚೇತನರಿಗೆ ಮಾಸಿಕ 1200 ರೂಪಾಯಿಗಳವರೆಗೆ ಸಹಾಯ ಧನ ಕಲ್ಪಿಸುತ್ತಿದೆ. ಆದರೆ ಹಿರಿಮಗ ಲಕ್ಕಪ್ಪನಿಗೆ ಮಾತ್ರ ಮಾಸಿಕ ಕೇವಲ 600 ರೂಪಾಯಿ ದೊರಕುತ್ತಿದೆ. ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಈ ಬಡ ಕುಟುಂಬದ ಮೂವರು ಮಕ್ಕಳಿಗೂ ತಲಾ 1200 ರೂಪಾಯಿ ದೊರಕುವಂತೆ ಸಂಬಂಧಪಟ್ಟ ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕಿದೆ.

ಈ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲಿಚ್ಚಿಸುವವರು ಶಿಂಗಾಡೆಪ್ಪ ಜಿಡ್ಡಿಮನಿ ಮೊ.9845550854 ಅಥವಾ ತುಂಗವ್ವ ಸಿದ್ದಪ್ಪ ಜಿಡ್ಡಿಮನಿ ಇವರನ್ನ ಸಂಪರ್ಕಿಸಬಹುದು. ಅಥವಾ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ: 89050090006(IFSC ಕೋಡ್: KVGB0001402) ಬನಹಟ್ಟಿ ಶಾಖೆ ಇದಕ್ಕೆ ಸಹಾಯ ಮಾಡಬಹುದು.

For All Latest Updates

TAGGED:

ABOUT THE AUTHOR

...view details