ಬಾಗಲಕೋಟೆ :ಪಂಚಮಸಾಲಿ ಸಮುದಾಯದ 3ನೇ ಪೀಠ ಇಂದು ಅಧಿಕೃತವಾಗಿ ಸ್ಥಾಪನೆಗೊಂಡಿತು. ಇದರಿಂದ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ವಿವಾದವು ಮತ್ತಷ್ಟು ಜಟಿಲಗೊಳ್ಳುವ ಸಾಧ್ಯತೆ ದಟ್ಟವಾಗುತ್ತಿದೆ.
ನೂತನ ಪೀಠಾಧಿಪತಿ ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಶ್ರೀ.. ವೀರಶೈವ ಲಿಂಗಾಯತ ಪಂಚನಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಹಿನ್ನೆಲೆಯಲ್ಲಿ, ಬ್ರಾಹ್ಮೀ ಮುಹೂರ್ತದಲ್ಲಿ ವಿವಿಧ ಪೂಜಾ ಕೈಂಕರ್ಯಗಳ ಮೂಲಕ ನೂತನ ಪೀಠಾಧಿಪತಿ ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯ ಶ್ರೀಗಳಿಗೆ ರುದ್ರಾಭಿಷೇಕ ನೆರವೇರಿಸಿ, ಮೂರನೇಯ ಪೀಠದ ಸ್ವಾಮೀಜಿ ಎಂಬುದು ಅಧಿಕೃತಗೊಳಿಸಲಾಯಿತು.
ಜಮಖಂಡಿ ತಾಲೂಕಿನ ಆಲುಗೂರ ಗ್ರಾಮದಲ್ಲಿ ಪೂಜಾ ಕೈಂಕರ್ಯಗಳು ನಡೆದಿದ್ದು, ಬೆಳಗ್ಗೆಯಿಂದಲೇ ಅಷ್ಟ ದುರ್ಗಾ ಪೂಜಾ, ಪಾರ್ವತಿ ಪೂಜಾ, ಏಕಾದಶಿ ಮಹಾರುದ್ರ ಪೂಜಾ, ಸ್ವಸ್ತಿಪುಣ್ಯ ಆಹ್ವಾನ ಪೂಜೆಗಳನ್ನ ನೆರವೇರಿಸಲಾಯಿತು.
ಇದರ ಜೊತೆಗೆ, ಪಂಚಮಸಾಲಿ 3ನೇ ಪೀಠದ ನೂತನ ಪೀಠಾಧಿಪತಿ ಕೃಷ್ಣಾ ನದಿಗೆ ಆರತಿ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮ ನಡೆಸಿದರು. ಚಿಕ್ಕಪಡಸಲಗಿ ಬ್ಯಾರೇಜ್ ಬಳಿ ನಡೆದ ಕೃಷ್ಣ ನದಿಗೆ ಪೂಜೆ ಸಲ್ಲಿಸಿ, ಕೃಷ್ಣಾರತಿ ಕಾರ್ಯಕ್ರಮ ನೆರವೇರಿಸಿದರು.
ಹರಿಹರ ಪೀಠದ ಜಗದ್ಗುರು ವಚನಾನಂದ ಶ್ರೀ, ಮನಗೂಳಿ ಹಿರೇಮಠದ ಸಂಗನಬಸವ ಶ್ರೀ, ಸಂಗಮೇಶ ನಿರಾಣಿ ಅವರ ಸಮ್ಮುಖದಲ್ಲಿ ಪಂಚಮಸಾಲಿ 3ನೇ ಪೀಠದ ಪೀಠಾಧಿಪತಿಯಾಗಿ ರುದ್ರಾಕ್ಷಿ ಕಿರೀಟವನ್ನು ಮಹಾದೇವ ಶಿವಾಚಾರ್ಯರು ತೊಡಿಸಿದರು.
ಪೀಠಾರೋಹಣ ಬಳಿಕ, ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೂತನ ಪೀಠದ ಪೀಠಾರೋಹಣ ವಹಿಸಿದ್ದಕ್ಕೆ ಸಂತಸವಾಗಿದೆ. 3ನೇ ಪೀಠದ ಅಧಿಕಾರವಹಿಸುವ ಮೂಲಕ ನಮ್ಮ ಜವಾಬ್ದಾರಿ ಹೆಚ್ಚಾಗಿದೆ.
ಬಸನಗೌಡ ಪಾಟೀಲ ಯತ್ನಾಳ್ ಕೂಡ ನಮ್ಮನ್ನು ಬೆಂಬಲಿಸುತ್ತಾರೆ :ಕೂಡಲಸಂಗಮ ಸ್ವಾಮೀಜಿ ವಿರೋಧಿಸಿದ್ದರೂ ತೊಂದರೆ ಇಲ್ಲ. ಅವರು ನಮ್ಮವರೇ, ಮುಂದಿನ ದಿನಗಳಲ್ಲಿ ನಮ್ಮೊಂದಿಗೆ ಬತಾ೯ರೆ ಅನ್ನೋ ವಿಶ್ವಾಸ ಇದೆ. ಕೂಡಲಸಂಗಮ ಸ್ವಾಮೀಜಿ ಜೊತೆ ಯತ್ನಾಳ್ ಅವರು ಸಹ ನಮ್ಮೊಂದಿಗೆ ಬರಲಿದ್ದಾರೆ.
ಎಲ್ಲರೊಂದಿಗೆ ಸೇರಿ ಸಮಾಜ ಅಭಿವೃದ್ಧಿ ಮಾಡೋದೆ ನಮ್ಮಯ ಗುರಿ. ಸಮುದಾಯದಲ್ಲಿ ಗೊಂದಲದ ಬಗ್ಗೆ ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ. ಎಲ್ಲರೂ ಒಗ್ಗೂಡಿಸಿ ಸಮಾಜದ ಅಭಿವೃದ್ಧಿ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಓದಿ:ವಕೀಲರ ಗಲಾಟೆ ಪ್ರಕರಣ: ವಕೀಲ ಜಗದೀಶ್ಗೆ ನ್ಯಾಯಾಂಗ ಬಂಧನ