ಬಾಗಲಕೋಟೆ : ಇಲ್ಲಿನ ತೋಟಗಾರಿಕೆ ವಿವಿಯ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಶೀಘ್ರವೇ ಆಧುನಿಕ ನಕ್ಷತ್ರಲೋಕ ಹಾಗೂ ಇತರ ಒಳಾಂಗಣ ವಿಜ್ಞಾನ ಉಪಕರಣಗಳನ್ನು ತರಿಸಲಾಗುವುದು ಎಂದು ತೋಟಗಾರಿಕೆ ವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ ತಿಳಿಸಿದರು.
ತೋಟಗಾರಿಕೆ ವಿವಿಯಲ್ಲಿ ಈ ಕುರಿತು ಜರುಗಿದ ವಿಜ್ಞಾನ ಕೇಂದ್ರದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 90 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ನಕ್ಷತ್ರಲೋಕ ಹಾಗೂ ಇತರ ವಿಜ್ಞಾನ ವಸ್ತುಗಳನ್ನು ಖರೀದಿಸಲು ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿಯಿಂದ ಅನುಮತಿ ದೊರೆತಿದೆ. ಶೀಘ್ರವೇ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯ ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನ ತಂತ್ರಜ್ಞಾನದ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಅಶೋಕ ಆಲೂರ ಮಾತನಾಡಿ, ಈಗಾಗಲೇ 4 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಉಪಕರಣಗಳನ್ನು ಸಹ ಖರೀದಿಸಲಾಗುವುದು. ವಿಜ್ಞಾನ ಕೇಂದ್ರದ ಸುತ್ತಲೂ ಉತ್ತಮ ಗಾರ್ಡನ್ ನಿರ್ಮಾಣಕ್ಕೆ 25 ಲಕ್ಷ ರೂ. ಹಾಗೂ ಪ್ರಸಕ್ತ ಸಾಲಿನ ವಿವಿಧ ಕಾರ್ಯಕ್ರಮಗಳಿಗೆ, ಸಿಬ್ಬಂದಿ ಖರ್ಚು ವೆಚ್ಚಕ್ಕೆ 30 ಲಕ್ಷ ರೂ. ವ್ಯಯಿಸಲಾಗುವುದು. ಕಟ್ಟಡದಲ್ಲಿ ವಿವಿಧ ಗ್ಯಾಲರಿಗಳು, ಪ್ರದರ್ಶನ ಮಳಿಗೆ, ವಿವಿಧ ವಿಷಯಗಳ ಪ್ರಾತ್ಯಕ್ಷಿಕೆಗಳನ್ನು ನಿರ್ಮಿಸಲಾಗಿದೆ. ಭಾರತೀಯ ವಿಜ್ಞಾನಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು, ಜೀವ ವೈವಿಧ್ಯತೆ, ಪರಿಸರ, ಆಹಾರ, ವಿಜ್ಞಾನ ದಿನ, ಮಹಿಳಾ ದಿನ, ಜಲ ದಿನಗಳನ್ನು ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಏರ್ಪಡಿಸಲಾಗುವುದು. ಕೀಟ ಪ್ರಪಂಚ, ವಿಜ್ಞಾನ ಜಾತ್ರೆ, ಪ್ರದರ್ಶನಗಳನ್ನು, ಸ್ಪರ್ಧೆಗಳನ್ನುಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿವಿವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಎನ್.ಹೆರಕಲ್, ಸಲಹಾ ಸಮಿತಿ ಸದಸ್ಯರಾದ ಪ್ರೊ.ಸಿ.ಜಿ.ಹವಾಲ್ದಾರ್ ಸೇರಿದಂತೆ ಹಲವರು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.