ಬಾಗಲಕೋಟೆ : ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಸಂಚರಿಸಿ ಅಧಿಕಾರಿಗಳೊಂದಿಗೆ ಸಭೆ ಹಾಗೂ ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮಾಹಿತಿ ಕಲೆ ಹಾಕಿದರು.
ಬೆಳಗಾವಿ ಜಿಲ್ಲೆಯಿಂದ ತೇರದಾಳ ಮೂಲಕ ಬನಹಟ್ಟಿ ಪಟ್ಟಣಕ್ಕೆ ಭೇಟಿ ನೀಡಿದ ಅವರು, ಕೊವೀಡ್ ಸೆಂಟರ್ಗೆ ಅಗತ್ಯವಿರುವ ಆಸ್ಪತ್ರೆ ಪರಿಶೀಲಿಸಿದರು. ನಂತರ ಜಮಖಂಡಿ ಉಪ ವಿಭಾಗ ಮಟ್ಟದ ಸಭೆಯನ್ನು ನಡೆಸಿದರು.
ಜಮಖಂಡಿ ಶಾಸಕ ಆನಂದ ನ್ಯಾಮಗೌಡರ, ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ, ಸಂಸದ ಪಿ.ಸಿ.ಗದ್ದಿಗೌಡರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಆಸ್ಪತ್ರೆ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದ ಸಚಿವ ಉಮೇಶ ಕತ್ತಿ.. ಈ ವೇಳೆ ಶಾಸಕರಾದ ಆನಂದ ನ್ಯಾಮಗೌಡ ಮಾತನಾಡಿ, ಆಕ್ಸಿಜನ್ ಬೆಡ್ ಸಾಕಷ್ಟು ಕೊರತೆ ಇದ್ದು, ಸಾಮಾನ್ಯ ಜನತೆ ಪರದಾಡುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಉಮೇಶ ಕತ್ತಿ ಮಾತನಾಡಿ, ರೆಮ್ಡಿಸಿವರ್ ಬಗ್ಗೆ ಯಾವುದೇ ಆತಂಕ ಬೇಡ, ಕೊರೊನಾ ರೋಗಕ್ಕೆ ಅದೇ ರಾಮಬಾಣವಲ್ಲ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಜಿಲ್ಲಾದ್ಯಂತ ಆಕ್ಸಿಜನ್ ಎಲ್ಲಿಯೂ ಕೊರತೆ ಇಲ್ಲ. ಆದರೆ, ಆಕ್ಸಿಜನ್ ಬೆಡ್ಗಳ ಸಮಸ್ಯೆ ಉಂಟಾಗುತ್ತಿದೆ.
ಗುಣಮುಖರಾದವರೂ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು, ಈ ಮೂಲಕ ಇತರೆ ಸೋಂಕಿತರಿಗೆ ಬೆಡ್ಗಳ ಅವಕಾಶ ಮಾಡಿಕೊಡಲು ಸಾಧ್ಯವಾಗುತ್ತದೆ ಎಂದರು.