ಬಾಗಲಕೋಟೆ: ನಗರದ ಸೋನಾರ ಬಡಾವಣೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ರಾತ್ರೋರಾತ್ರಿ ಪ್ರತಿಷ್ಠಾಪಿಸಿದ್ದ ಶಿವಾಜಿ ಮೂರ್ತಿಯನ್ನು ಪೊಲೀಸರು ಸೂಕ್ತ ಭದ್ರತೆ ನಡುವೆ ತೆರವುಗೊಳಿಸಿದ್ದಾರೆ. ಈ ಮೂರ್ತಿಯನ್ನು ಪ್ರತಿಷ್ಠಾಪನೆ ಕಾರಣ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಮೂರ್ತಿ ತೆರವುಗೊಳಿಸುವ ಮಾಹಿತಿ ಹರಡುತ್ತಿದ್ದಂತೆ ಕೆಲ ಸಂಘಟನೆ ಹಾಗೂ ಕೆಲವು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ, ಸ್ಥಳಕ್ಕಾಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ್ ಪ್ರತಿಭಟನಾನಿರತರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೂ ಪೊಲೀಸರ ಪ್ರಯತ್ನಕ್ಕೆ ಜಗ್ಗದ ಕೆಲ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ಸ್ಥಳದಲ್ಲಿ ಯಾರೂ ಇರದಂತೆ ನೋಡಿಕೊಂಡರು. ಬಳಿಕ ಪೊಲೀಸ್ ಸಿಬ್ಬಂದಿ ಜೆಸಿಬಿ ಸಹಾಯದಿಂದ ಮೂರ್ತಿ ತೆರವುಗೊಳಿಸಿದರು. ಆದರೆ, ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಆ ಸಂಘಟನೆಯ ಪ್ರಮುಖ ಮುಖಂಡರು ಬಾಗಲಕೋಟೆ ನಗರ ಪೊಲೀಸ್ ಠಾಣೆ ಎದುರು ಜಮಾವಣೆಯಾದರು.
ಸೋನಾರ ಬಡಾವಣೆಯಲ್ಲಿ ಮೂರ್ತಿ ಅನಧಿಕೃತವಾಗಿದ್ದು, ಅದನ್ನು ತೆರವುಗೊಳಿಸಲಾಗುವುದು. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂಬ ಉದ್ದೇಶದಿಂದ ನಗರದಲ್ಲಿ ಆಗಸ್ಟ್ 16 ರಿಂದ 17ರ ಮಧ್ಯರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಆದೇಶ ಹೊರಡಿಸಿದ್ದರು.