ಕರ್ನಾಟಕ

karnataka

ETV Bharat / state

ಜನವರಿ 2 ರಿಂದ 4ರವರೆಗೆ ತೋಟಗಾರಿಕೆ ಮೇಳ: ಕುಲಪತಿ ಇಂದಿರೇಶ

ಈ ವರ್ಷ ಕೋವಿಡ್-19 ಹಿನ್ನೆಲೆ ತೋಟಗಾರಿಕೆ ಮೇಳವನ್ನು ಆನ್‍ಲೈನ್ ಮತ್ತು ಆಫ್​ಲೈನ್ ಎರಡು ಕ್ರಮಗಳ ಮೂಲಕ ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ತೋಟಗಾರಿಕೆ ಮೇಳದಲ್ಲಿ ಸೀಮಿತ ಪ್ರಮಾಣದಲ್ಲಿ ರೈತರನ್ನು ಆಹ್ವಾನಿಸಲಾಗುತ್ತಿದೆ ಎಂದು ತೋವಿವಿ ಕುಲಪತಿ ಡಾ.ಕೆ.ಎಂ. ಇಂದಿರೇಶ ತಿಳಿಸಿದರು.

ಕುಲಪತಿ ಇಂದಿರೇಶ
ಕುಲಪತಿ ಇಂದಿರೇಶ

By

Published : Dec 31, 2020, 4:51 PM IST

Updated : Dec 31, 2020, 4:56 PM IST

ಬಾಗಲಕೋಟೆ:ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಜನೇವರಿ 2 ರಿಂದ 4ರವರೆಗೆ ಮೂರು ದಿನಗಳ ಕಾಲ ಆರೋಗ್ಯಕ್ಕಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿ ಕುಲಪತಿ ಡಾ. ಕೆ.ಎಂ. ಇಂದಿರೇಶ ತಿಳಿಸಿದರು.

ತೋಟಗಾರಿಕೆ‌ ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವರ್ಷ ಕೋವಿಡ್-19 ಹಿನ್ನೆಲೆ ಈ ಮೇಳವನ್ನು ಆನ್‍ಲೈನ್ ಮತ್ತು ಆಫ್​ಲೈನ್ ಎರಡು ಕ್ರಮಗಳ ಮೂಲಕ ವಿಶೇಷವಾಗಿ ಆಯೋಜಿಸಲಾಗುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ತೋಟಗಾರಿಕೆ ಮೇಳದಲ್ಲಿ ಸೀಮಿತ ಪ್ರಮಾಣದಲ್ಲಿ ರೈತರನ್ನು ಆಹ್ವಾನಿಸಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್-19 ಪರಿಣಾಮದಿಂದಾಗಿ ಮೇಳಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದ ಕಾರಣ ಹೆಚ್ಚಿನ ಜನ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪರ್ಯಾಯವಾಗಿ ಆನ್‍ಲೈನ್ ಮೂಲಕ ಮೇಳ ವೀಕ್ಷಣೆಗೆ ಯ್ಯೂಟೂಬ್, ಫೇಸ್‍ಬುಕ್, ವಿಶ್ವವಿದ್ಯಾಲಯದ ವೆಬ್‍ಸೈಟ್ ಮೂಲಕ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲಿಯೇ ಇದ್ದು ಮೇಳದ ವಿಶೇಷತೆಗಳನ್ನು ವೀಕ್ಷಿಸಬಹುದಾಗಿದೆ. ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಾನುಸಾರ ಸ್ಯಾನಿಟೈಜರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕ್ರಮವಹಿಸಲಾಗುತ್ತಿದೆ ಎಂದರು.

ತೋಟಗಾರಿಕೆ ಮೇಳಕ್ಕೆ ಸಿಎಂ ಚಾಲನೆ :
ಮೂರು ದಿನಗಳ ಕಾಲ ಜರುಗುವ ತೋಟಗಾರಿಕೆ ಮೇಳಕ್ಕೆ ಜನವರಿ 2 ರಂದು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಆನ್‍ಲೈನ್ ಮೂಲಕ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ವೀರಣ್ಣ ಚರಂತಿಮಠ ವಹಿಸುವರು. ಇದೇ ಸಂದರ್ಭದಲ್ಲಿ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಕೋವಿಡ್ ಮಹಾಮಾರಿಗೆ ಪ್ರತಿರೋಧಕ ಶಕ್ತಿಯನ್ನು ಒದಗಿಸುವಲ್ಲಿ ದೇಶೀಯ ಮಸಾಲೆ ಪದಾರ್ಥಗಳ ಪಾತ್ರ ಕುರಿತು ತಾಂತ್ರಿಕ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

2ನೇ ದಿನ ಜನವರಿ 3 ರಂದು 23 ಜಿಲ್ಲೆಗಳಿಂದ ಆಯ್ಕೆಯಾದ ಫಲಶ್ರೇಷ್ಠ ರೈತರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಡಾ. ಕೆ.ಸಿ. ನಾರಾಯಣಗೌಡ, ಕೃಷಿ ಸಚಿವ ಬಿ.ಸಿ. ಪಾಟೀಲ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಪಾಲ್ಗೊಳ್ಳಲಿದ್ದಾರೆ. ನಂತರ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ. ಜನವರಿ 4 ರಂದು ಮೇಳದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಮುರುಘಾಮಠದ ಡಾ. ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡರ, ಅತಿಥಿಗಳಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಭಾಗವಹಿಸಲಿದ್ದಾರೆ. ಬೆಳಗ್ಗೆ ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಯಿಂದ ಆತ್ಮ ನಿರ್ಭರ ಭಾರತ ಕುರಿತು ತಾಂತ್ರಿಕ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

ಮೇಳದ ವಿಶೇಷತೆಗಳು :

ಮೇಳದಲ್ಲಿ ಲಾಭದಾಯಕ ಪದ್ದತಿ, ಜಲ ವಿಜ್ಞಾನ ತೋಟಗಳ, ಮೀನುಗಾರಿಕೆ ಅಕ್ವೇರಿಯಂ ಮತ್ತು ಮುಧೋಳ ಶ್ವಾನ ತಳಿಗಳ ಪ್ರಾತ್ಯಕ್ಷಿಕೆ, ತೋವಿವಿಯ ಬಿಡುಗಡೆಗೊಳಿಸಿದ ಮತ್ತು ಅಭಿವೃದ್ದಿಪಡಿಸಿದ ಹಣ್ಣು, ತರಕಾರಿ, ಹೂ, ತೋಟಪಟ್ಟಿ, ಮಸಾಲೆ, ಔಷಧೀಯ ಮತ್ತು ಸುಗಂಧದ್ರವ್ಯ ಬೆಳೆಗಳ ಪ್ರದರ್ಶನ, ರೈತರಿಗೆ ಸಲಹೆ ಮತ್ತು ತಾಂತ್ರಿಕ ಮಾಹಿತಿ ತಂತ್ರಜ್ಞಾನ, ತೋವಿವಿಯಿಂದ ಉತ್ಪಾದನೆಗೊಂಡ ಬೀಜಗಳು, ಸಸ್ಯ ಪರಿಕರಗಳು, ಸೂಕ್ಷ್ಮಾಣು ಜೀವಿಗಳ ಉತ್ಪಾದನೆಗಳ ಮಾರಾಟ ಹಾಗೂ ರೈತರ ಯಶೋಗಾಥೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೋವಿಡ್ ಪರಿಣಾಮದ ಸಂದಿಗ್ದ ಪರಿಸ್ಥಿತಿಯಲ್ಲಿಯೂ ಸಹ ಎಲ್ಲ ಜೀವರಾಶಿಗಳ ಮೂಲಾಧಾರವಾದ ಕೃಷಿ ಕ್ಷೇತ್ರ ಮಾತ್ರ ತನ್ನ ಕಾರ್ಯವನ್ನು ನಿರಂತರವಾಗಿ ಮಾಡಿರುವುದು ನಿಜಕ್ಕೂ ಅವಿಸ್ಮರಣೀಯ. ಇಂತಹ ಕ್ಷೇತ್ರದ ಮಾಹಿತಿ ಬಿತ್ತರಿಸುವ ತೋಟಗಾರಿಕೆ ಮೇಳವನ್ನು ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳು ಆನ್‍ಲೈನ್ ಮತ್ತು ಸೀಮಿತ ಪ್ರಮಾಣದ ಆಫ್‍ಲೈನ್ ಮೂಲಕ ಉಪಸ್ಥಿತರಿದ್ದು, ತೋಟಗಾರಿಕೆ ಬೆಳೆಗಳ ಪ್ರಾತ್ಯಕ್ಷಿಕೆ ಹಾಗೂ ತಂತ್ರಜ್ಞಾನಗಳ ಲಾಭವನ್ನು ಪಡೆದುಕೊಳ್ಳುವಂತೆ ತೋವಿವಿಯ ಕುಲಪತಿಗಳು ಕೋರಿದರು.

Last Updated : Dec 31, 2020, 4:56 PM IST

ABOUT THE AUTHOR

...view details