ಬಾಗಲಕೋಟೆ: ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳೆರಡನ್ನೂ ಒಂದಾಗಿಸಿದರೆ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮಲು ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವಿಲೀನದಿಂದ ಅಭಿವೃದ್ಧಿ ಸಾಧ್ಯ: ಸಚಿವ ಶ್ರೀರಾಮುಲು
ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗಳೆರಡನ್ನೂ ಸೇರಿ ಒಂದೇ ಇಲಾಖೆ ಮಾಡಬೇಕು. ಇದರಿಂದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮಲು ಅಭಿಪ್ರಾಯಪಟ್ಟರು.
ಬಾಗಲಕೋಟೆ ನಗರದ ಎಸ್.ನಿಜಲಿಂಗಪ್ಪ ಮೆಡಿಕಲ್ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ಯಾಪ್ಕಕಾನ್ 2019ರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳು ಸಾಕಷ್ಟಿವೆ. ಇಲ್ಲಿ ಗುಣಮಟ್ಟ ಶಿಕ್ಷಣ ದೊರೆಯುವ ಕಾರಣ ವೈದ್ಯಕೀಯ ಶಿಕ್ಷಣಕ್ಕಾಗಿ ದೇಶ-ವಿದೇಶಗಳಿಂದ ರಾಜ್ಯಕ್ಕೆ ಬರುತ್ತಾರೆ. ಹೀಗಾಗಿ ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳನ್ನು ಒಂದೇ ಇಲಾಖೆ ಮಾಡಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಶಾಸಕ ವೀರಣ್ಣ ಚರಂತಿಮಠ ಮಾತನಾಡಿ, ಕಡಿಮೆ ರಕ್ತ ಇರುವ ರೋಗಿಗಳ ಅನುಕೂಲಕ್ಕಾಗಿ ನಮ್ಮ ಸಂಸ್ಥೆಗೆ ನೋಡಲ್ ಕಚೇರಿ ಸರ್ಕಾರದಿಂದ ಪ್ರಾರಂಭಿಸಬೇಕು. ಈಗಾಗಲೇ ಸಹಕಾರಿ ಸಂಘದಿಂದ ₹ 26 ಲಕ್ಷ ಅನುದಾನ ನೀಡಿದ್ದು, ಸರ್ಕಾರವೂ ಅನುದಾನ ಒದಗಿಸಿದಲ್ಲಿ ಮತ್ತಷ್ಟು ಅನುಕೂಲವಾಗಲಿದೆ ಎಂದು ಒತ್ತಾಯಿಸಿದರು. ಇದೇ ಸಮಯದಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ವೈದ್ಯರನ್ನು ಸನ್ಮಾನಿಸಲಾಯಿತು.