ಬಾಗಲಕೋಟೆ: ಇಂದು ವಿಶ್ವ ಎಳನೀರು ದಿನ. ಇದನ್ನೇ ಜೀವನದ ಉಪಕಸುಬಾಗಿ ಅಳವಡಿಸಿಕೊಂಡು ಜೀವನ ಸಾಗಿಸುತ್ತಿರುವವರು ಸಾಕಷ್ಟು ಜನರಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಅನೇಕ ಮಹಿಳೆಯರು ಎಳನೀರು ವ್ಯಾಪಾರವನ್ನೇ ನೆಚ್ಚಿಕೊಂಡಿದ್ದಾರೆ.
ಎಳನೀರು ವ್ಯಾಪಾರದ ಕುರಿತು ವ್ಯಾಪರಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ ಜಿಲ್ಲೆಯ ನವನಗರದ ಕಾಳಿದಾಸ ವೃತ್ತ ಸೇರಿದಂತೆ ಪ್ರಮುಖ ಆಯಾಕಟ್ಟಿನ ಸ್ಥಳದಲ್ಲಿ ಮಹಿಳೆಯರು ಎಳನೀರು ಮಾರಾಟ ಮಾಡಿ, ತಮ್ಮ ಉಪ ಜೀವನ ಸಾಗಿಸುತ್ತಿದ್ದಾರೆ.
ದಾವಣಗೆರೆ, ಹೊನ್ನಳ್ಳಿ, ಹರಿಹರ ಸೇರಿದಂತೆ ಇತರ ಪ್ರದೇಶಗಳಿಂದ ಲಾರಿ ಮೂಲಕ ಎಳನೀರು ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಮಹಿಳೆಯರು ಈ ವ್ಯಾಪಾರವನ್ನೇ ಅವಲಂಬಿಸಿದ್ದಾರೆ.
ಪ್ರತಿ ಒಂದು ಎಳನೀರಿಗೆ 30 ರೂಪಾಯಿಗಳಂತೆ, ಪ್ರತಿ ನಿತ್ಯ 60 ರಿಂದ100 ರವರೆಗೆ ಎಳನೀರು ಮಾರಾಟ ಮಾಡುತ್ತಾರೆ. ಬಂದ ಲಾಭದಿಂದಲೇ ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣಕ್ಕೆ ಸೇರಿದಂತೆ ಇತರ ವೆಚ್ಚವನ್ನು ಭರಿಸಿಕೊಂಡು, ಜೀವನದ ದಾರಿ ಕಂಡುಕೊಂಡಿದ್ದಾರೆ.
'ಬೇಸಿಗೆ ಸಮಯದಲ್ಲಿ ಸುಮಾರು 500ರೂ ಗಳವರೆಗೆ ಎಳನೀರು ಮಾರಾಟ ಆಗುತ್ತದೆ. ಆಗ ಜೀವನ ನಿರ್ವಹಣೆಗೆ ತೊಂದರೆ ಆಗಲ್ಲ. ಆದರೀಗ ಕೊರೊನಾ ಲಾಕ್ಡೌನ್ನಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಸಾಲ ಮಾಡಿಕೊಂಡಿದ್ದೇವೆ. ಹೇಗೋ ನಿಧಾನವಾಗಿ ತೀರಿಸುತ್ತಿದ್ದೇವೆ. ತಾವು ಮಾಡುತ್ತಿರುವ ಉದ್ಯೋಗಕ್ಕೂ ದಿನ ಇದೆ ಎಂಬುದೇ ಗೊತ್ತಿಲ್ಲ' ಎಂದು ಎಳನೀರು ವ್ಯಾಪಾರಿ ಕಸ್ತೂರಿಬಾಯಿ ಹೇಳುತ್ತಾರೆ.
ಈ ಮಹಿಳೆಯರು ತಮ್ಮ ಜೀವನದ ಬಂಡಿ ಸಾಗಿದರೆ ಸಾಕು ಎನ್ನುವ ಚಿಂತೆಯಲ್ಲಿ ಇದ್ದಾರೆ. ಈ ನಡುವೆ ಕೊರೊನಾದಿಂದ ವ್ಯಾಪಾರಕ್ಕೆ ತೊಂದರೆಯಾಗಿದೆ. ಅದರಲ್ಲೂ ಸರ್ಕಾರದ ಪರಿಹಾರದ ಹಣವೂ ಲಭ್ಯವಾಗದೆ ಕಂಗಾಲಾಗಿದ್ದಾರೆ.
ಇದನ್ನೂ ಓದಿ:ಸೆಪ್ಟೆಂಬರ್ 6 ರಿಂದ ಆರರಿಂದ ಎಂಟನೇ ತರಗತಿಗಳು ಆರಂಭ: ಶಿಕ್ಷಣ ಸಚಿವ ನಾಗೇಶ್