ಬಾಗಲಕೋಟೆ:ಜುಲೈ 1ರಿಂದ ಶಾಲೆ ಆರಂಭ ಎನ್ನುವುದು ಸರ್ಕಾರದ ನಿರ್ಧರಿಸಿದ ದಿನಾಂಕ ಅಲ್ಲ. ಪಾಲಕರ ಸಭೆಯ ಬಳಿಕ ಅವರ ಅಭಿಪ್ರಾಯದ ನಂತರವೇ ಶಾಲೆ ತೆರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ವಿಜಯಪುರ-ಬಾಗಲಕೋಟೆ ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಪರೀಕ್ಷೆ ಹಾಗೂ ಶಾಲೆಯ ಪ್ರಾರಂಭ ಹಾಗೂ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮೇ 31ಕ್ಕೆ ಪತ್ರ ಬಂದಿದೆ. ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಯೋಚನೆ ಮಾಡುವಾಗ ರಾಜ್ಯದ ಮಕ್ಕಳ ಪೋಷಕರ ಜೊತೆಗೆ ಸಂವಾದ ಮಾಡಬೇಕು ಎಂಬ ಮಾಹಿತಿ ಬಂದಿದೆ ಎಂದು ತಿಳಿಸಿದರು.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಬೇಕಿದೆ. ಈ ಹಿನ್ನೆಲೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಸಭೆ ನಡೆಸಲಾಗುವುದು. ಜೂನ್ 15ರ ಒಳಗಾಗಿ ಮಕ್ಕಳ ಪಾಲಕರು, ಷೋಷಕರು, ಎಸ್ಡಿಎಂಸಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುವುದು. ಕೇಂದ್ರ ಸರ್ಕಾರದಿಂದ ಮಾಹಿತಿ ಬಂದ ಮೇಲೆ ಶಾಲೆಗಳ ಪ್ರಾರಂಭದ ಬಗ್ಗೆ ರಾಜ್ಯ ಸರ್ಕಾರದಿಂದ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಹಾಗೆಯೇ ಎಸ್ಎಸ್ಎಲ್ಸಿ ಪರೀಕ್ಷೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ರಾಜ್ಯದ 8.50 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ ಮಾಡುವುದಾಗಿ ತಿಳಿಸಲಾಗಿದೆ. ಅದೇ ರೀತಿ ಸ್ಯಾನಿಟೈಸರ್ ಸಹ ನೀಡಲು ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಮುಂದಾಗಿದ್ದು, ಸಾಮಾಜಿಕ ಅಂತರ ಪಾಲನೆ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.