ಬಾಗಲಕೋಟೆ: ವಿದ್ಯಾರ್ಥಿನಿಯೋರ್ವರು ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ 16 ಚಿನ್ನದ ಪದಕ ಗಳಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಮೂಲತಃ ಚಿಕ್ಕಮಗಳೂರಿನ ಉಮ್ಮೆಸಾರಾ ಎಂಬ ವಿದ್ಯಾರ್ಥಿನಿ ತೋಟಗಾರಿಕೆ ಸ್ನಾತಕೋತ್ತರ ಪದವಿಯಲ್ಲಿ 16 ಚಿನ್ನದ ಪದಕ ಗಳಿಸಿದ್ದಾರೆ.
ನಾಲ್ಕು ಏಕರೆ ಜಮೀನು ಹೊಂದಿರುವ ತಂದೆ ಅಸ್ಮತ್ ಆಲಿ ಜೊತೆಗೆ ಕೃಷಿ, ತೋಟಗಾರಿಕೆ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಬಂದು ತೋಟಗಾರಿಕೆ ವಿದ್ಯಾಭ್ಯಾಸದಲ್ಲಿ ಈ ಸಾಧನೆ ಮಾಡಿದ್ದಾರೆ.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಅಲ್ಪಸಂಖ್ಯಾತರ ಕುಟುಂಬದಲ್ಲಿ ಹುಟ್ಟಿ 16 ಚಿನ್ನದ ಪದಕ ಪಡೆದುಕೊಂಡಿರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಇದೇ ಪ್ರಥಮವಾಗಿದೆ.
ಮೂಡಬಿದಿರೆಯಲ್ಲಿ ಶಾಲೆ, ಪಿಯುಸಿ ಅಧ್ಯಯನ ಮಾಡಿ, ಶಿರಸಿಯಲ್ಲಿ ಡಿಗ್ರಿ ಅಧ್ಯಾಯ ಮುಗಿಸಿದ ಬಳಿಕ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಈ ಸಾಧನೆಗೈದಿದ್ದಾರೆ.
ಅಪ್ಪ ಕೃಷಿಕ.. ಕೃಷಿ ಪದವಿಯಲ್ಲಿ ಮಗಳ ಅದ್ವಿತೀಯ ಸಾಧನೆ.. ಉನ್ನತ ವ್ಯಾಸಂಗಕ್ಕೆ ಬ್ಯಾಂಕ್ನಿಂದ ಸಿಗಬೇಕಾಗಿರುವ ಸಾಲಕ್ಕೆ ಪರದಾಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಹೀಗಾಗಿ, ನನ್ನ ಪೋಷಕರು ಕಷ್ಟಪಟ್ಟು ದುಡಿದು ಹೇಗೋ ಹಣ ಸಂಗ್ರಹ ಮಾಡಿ ಉನ್ನತ ವಿದ್ಯಾಭ್ಯಾಸ ಮಾಡಲು ಸಹಕರಿಸಿದ್ದಾರೆ. ತಂದೆ ಅಸ್ಮತ್ ಆಲಿ ಮತ್ತು ತಾಯಿ ರಹೀಮ ಬಾನು ಅವರ ಸಹಕಾರ ಹಾಗೂ ಪ್ರೋತ್ಸಾಹದಿಂದಾಗಿ ಈ ಸಾಧನೆ ಮಾಡಲು ಅನುಕೂಲವಾಗಿದೆ.
ವೈಜ್ಞಾನಿಕ ಸಂಶೋಧನೆಯಲ್ಲಿ ಮುಂದುವರಿಯುವ ಮೂಲಕ ರೈತ ಸಮುದಾಯಕ್ಕೆ ಏನಾದರೂ ಸಹಾಯ ಮಾಡುವ ಉದ್ದೇಶ ಹೊಂದಿರುವುದಾಗಿ ವಿದ್ಯಾರ್ಥಿನಿ ಉಮ್ಮೆಸಾರಾ ತಿಳಿಸಿದರು.
ಇದನ್ನೂ ಓದಿ:ದಾವೋಸ್ನಿಂದ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ