ಬಾಗಲಕೋಟೆ: ಕಾರಿನ ಗ್ಲಾಸ್ ಒಡೆದು ಹಣ ಹಾಗೂ ವಸ್ತುಗಳನ್ನು ಖದೀಮರು ದೋಚಿರುವ ಘಟನೆ ಜಿಲ್ಲೆಯ ಇಳಕಲ್ ಪಟ್ಟಣದಲ್ಲಿ ವರದಿಯಾಗಿದೆ. ವಸತಿ ಗೃಹದ ಎದುರು ನಿಲ್ಲಿಸಿದ್ದ ಕಾರಿನಲ್ಲಿ ಹಾಡಹಗಲೇ ಕಳ್ಳತನ ಮಾಡಿ, ಹಣ ಹಾಗೂ ಇತರ ವಸ್ತುಗಳನ್ನು ದೋಚಿಕೊಂಡು ಪರಾರಿ ಆಗಿದ್ದಾರೆ. ಇಳಕಲ್ ನಗರದ ಬಸ್ ನಿಲ್ದಾಣ ಪಕ್ಕದಲ್ಲಿರುವ ಜೆಬಿ ಲಾಡ್ಜ್ ಎದುರು ಈ ಘಟನೆ ನಡೆದಿದೆ.
ಕಾರಿನ ಮುಂಭಾಗದ ಗಾಜು ಒಡೆದು 1 ಲಕ್ಷ 59 ಸಾವಿರ 500 ರೂ. ನಗದು ಹಣ ಹಾಗೂ ನಾಲ್ಕು ಎಟಿಎಂ, ಎರಡು ಪಾನ್ ಕಾರ್ಡ್, ಸ್ಮಾರ್ಟ್ ಫೋನ್ ಇದ್ದ ಬ್ಯಾಗ್ವನ್ನು ಕಳ್ಳತನ ಮಾಡಿದ್ದಾರೆ. ಮಹಾರಾಷ್ಟ್ರ ಮೂಲದ ವಾಹನ ಇದಾಗಿದ್ದು, ರತ್ನಗಿರಿ ಜಿಲ್ಲೆ ಕರವಂಚವಾಡಿ ಗ್ರಾಮದ ಬಜರಂಗ ಸುವಾಲಾಲ ರಾಚೋರಿ ಎನ್ನುವರಿಗೆ ಸೇರಿದ ವಾಹನ ಎಂದು ತಿಳಿದು ಬಂದಿದೆ.