ಬಾಗಲಕೋಟೆ: ನೇಕಾರರಿಗೆ ಈ ಬಾರಿಯ ಬಜೆಟ್ನಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಕಟ್ಟ ಕಡೆಯ ನೇಕಾರನಿಗೂ ಸೌಲಭ್ಯಗಳು ದೊರಕುವಂತಾಗಬೇಕು. ರಾಜ್ಯ ಸರ್ಕಾರ ನೇಕಾರರಿಗೆ ಅನ್ಯಾಯವೆಸಗುತ್ತಿದೆ. ಇನ್ನಾದರೂ ನ್ಯಾಯ ಒದಗಿಸಿ ಎಂದು ಮಾನ್ಯ ಮುಖ್ಯಮಂತ್ರಿಗಳ ಗೃಹ ಕಚೇರಿಯ ಮುಂದೆ ನಮ್ಮ ಹಕ್ಕೊತ್ತಾಯಗಳು ಈಡೇರಿಕೆಯಾಗುವವರೆಗೂ ರಾಜ್ಯದ ಎಲ್ಲಾ ಊರುಗಳಲ್ಲಿರುವ ನೇಕಾರರು ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬಾಗಲಕೋಟೆ ನೇಕಾರರ ಪ್ರಮುಖ ಬೇಡಿಕೆಗಳು ಬಾಗಲಕೋಟೆ ಜಿಲ್ಲೆಯ ರಬಕವಿ, ಬನ್ನಹಟ್ಟಿ,ಇಲಕಲ್ಲ ಸೇರಿದಂತೆ ಇತರೆ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೇಕಾರರು ಇದ್ದಾರೆ. ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರಂತೆ ಸೌಲಭ್ಯಗಳನ್ನು ಜಾರಿ ಮಾಡುವುದು, ರಾಜ್ಯದ ನೇಕಾರರ ಸಂಪೂರ್ಣ ಸಾಲ ಮನ್ನಾ, 55 ವರ್ಷದ ನೇಕಾರರಿಗೆ ಮಾಸಿಕ 5,000 ಪಿಂಚಣಿ, ನೇಕಾರ ಸಮ್ಮಾನ ಯೋಜನೆಯಲ್ಲಿ ವಿದ್ಯುತ್ ಚಾಲಿತ ಮಗ್ಗದ ನೇಕಾರರನ್ನು ಸೇರಿಸಿ ರೈತರಂತೆ ನೇಕಾರರಿಗೂ ವಾರ್ಷಿಕ ಕನಿಷ್ಠ 10 ಸಾವಿರ ರೂಪಾಯಿಗಳನ್ನು ಜಾರಿ ಮಾಡಬೇಕು. ಸಾಲದ ಹೊರೆಯಿಂದ 33 ಜನರು ಆತ್ಮಹತ್ಯೆಗೆ ಶರಣಾಗಿದ್ದು, ಅವರ ಕುಟುಂಬದವರಿಗೆ ಕನಿಷ್ಠ 10 ಲಕ್ಷ ರೂಪಾಯಿಗಳ ಪರಿಹಾರ ಕೊಡಬೇಕು. ಕೆ.ಎಚ್.ಡಿ.ಸಿ. 110 ಕೋಟಿ ರೂ.ಗಳ ಸಾಲವನ್ನು ಸರ್ಕಾರವೇ ಭರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ನಿಗಮದ ಶ್ರೇಯೋಭಿವೃದ್ಧಿಗಾಗಿ ಆವೃತ್ತ ನಿಧಿ ಸ್ಥಾಪಿಸಬೇಕು. ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ನೇಕಾರರ ಮನೆಗಳಿಗೆ ಹಾಗೂ ಮಗ್ಗಗಳಿಗೆ ಸೂಕ್ತ ಪರಿಹಾರವನ್ನು ತುರ್ತಾಗಿ ಕೊಡಬೇಕು. ಮಲ್ಟಿ ಸ್ಟೇಟ್ ಕೋ-ಆಪ್ ಸೋಸಾಯಿಟಿ ಗಳಲ್ಲಿ ವೃತ್ತಿಪರ ನೇಕಾರರು ಸಾಲ ಪಡೆದಿದ್ದು, ಸಾಲ ಮನ್ನಾ ಮಾಡಬೇಕು. ಕೈಮಗ್ಗ ನೇಕಾರರ ಹಾಗೂ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರ ಉತ್ಪನ್ನಗಳಿಗೆ ಪ್ರದರ್ಶನ ಮಳಿಗೆಯನ್ನು ಪ್ರಾರಂಭಿಸಬೇಕು. ಮಗ್ಗದ ಮನೆಯ ಕಾರ್ಯಾಗಾರ ನಿರ್ಮಿಸಿಕೊಳ್ಳಲು 5 ಲಕ್ಷ ರೂ. ಅನುದಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶಿವಲಿಂಗ ಟಿರಕಿ ತಿಳಿಸಿದ್ದಾರೆ.