ಬಾಗಲಕೋಟೆ:ಐತಿಹಾಸಿಕ ತಾಣ ಹಾಗೂ ಧಾರ್ಮಿಕ ಕೇಂದ್ರವಾಗಿ, ನಿರಂತರ ದಾಸೋಹ ಮಠ ಎಂದು ಹೆಸರುವಾಸಿಯಾಗಿರುವ ಸಿದ್ದನಕೊಳ್ಳದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಸಿದ್ದಶ್ರೀ ಉತ್ಸವವು ಈ ಬಾರಿಯು ಅದ್ದೂರಿಯಾಗಿ ನೆರವೇರಿತು. ಪ್ರತಿವರ್ಷ ಜನವರಿ 14 ರಂದು ಜಾತ್ರಾ ಮಹೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಸಿದ್ದಶ್ರೀ ಉತ್ಸವ ಹಾಗೂ ಚಲನಚಿತ್ರೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಈ ಬಾರಿ ಪುಣ್ಯಕ್ಷೇತ್ರ ಸಿದ್ದನಕೊಳ್ಳದ ಸಿದ್ದೇಶ್ವರ ಮಠದಿಂದ 2023ನೇ ಸಾಲಿನ ಶ್ರೀ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ವಿಆರ್ಎಲ್ ಸಮೂಹ ಸಂಸ್ಥೆ ಚೇರ್ಮನ್ ಡಾ ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು. ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ. ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಡಾ. ವಿಜಯ ಸಂಕೇಶ್ವರ ಅವರಿಗೆ ಮೈಸೂರು ಪೇಟ, ಶಾಲು, ಹಾರ ಹಾಕಿ, ಪಾರಿತೋಷಕ ಹಾಗೂ ನಗದು ಹಣದೊಂದಿಗೆ ಶ್ರೀ ಸಿದ್ಧಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲೆ, ಕಲಾವಿದರ ಪ್ರೋತ್ಸಾಹಿಸುವ ಮಠ ಎಂದು ಖ್ಯಾತಿ ಪಡೆದಿರುವ ಸಿದ್ದನಕೊಳ್ಳದ ಮಠದಿಂದ ಉತ್ಸವದ ವೇಳೆ ಚಲನಚಿತ್ರೋತ್ಸವ ನಡೆಯುತ್ತ ಬಂದಿದ್ದು, ಈ ವರ್ಷದ ಅತ್ಯುತ್ತಮ ಬಯೋಫಿಕ್ ಚಿತ್ರ ಎಂದು ವಿಜಯಾನಂದ ಚಿತ್ರಕ್ಕೆ ಶ್ರೀಮಠದಿಂದ ಪ್ರಶಸ್ತಿ ಚಿತ್ರತಂಡದ ಪರವಾಗಿ ಡಾ. ವಿಜಯ ಸಂಕೇಶ್ವರ ಅವರಿಗೆ ಪ್ರದಾನ ಮಾಡಲಾಯಿತು. ಕಾಯಕದಲ್ಲಿ ದೇವರನ್ನು ಕಾಣುವ ಡಾ ಸಂಕೇಶ್ವರ ಅವರಿಗೆ ಈ ಪ್ರಶಸ್ತಿ ನೀಡಿದ್ದು, ಶ್ರೀಮಠ ಹಾಗೂ ಮಠದ ಭಕ್ತರಿಗೆ ಅಪಾರ ಸಂತೋಷ ತಂದಿದೆ. ಬಿಡುವಿಲ್ಲದ ಕರ್ತವ್ಯದ ಮಧ್ಯೆಯೂ ಸಿದ್ದನಕೊಳ್ಳಕ್ಕೆ ಆಗಮಿಸಿ ನಮ್ಮ ಗೌರವ ಸ್ವೀಕರಿಸಿದ ಬಗ್ಗೆ ಮಠದ ಧರ್ಮಾಧಿಕಾರಿ ಡಾ ಶಿವಕುಮಾರ ಸ್ವಾಮೀಜಿ ಸಂತೋಷ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ ವಿಜಯ ಸಂಕೇಶ್ವರ್, ಮಠದ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಮಠ, ಮಂದಿರ, ಪೂಜ್ಯರ ದರ್ಶನ, ಆಶೀರ್ವಾದ ಪಡೆಯುವುದನ್ನು ಅನೇಕ ವರ್ಷಗಳಿಂದಲೂ ನಡೆದಿದ್ದು, ಇದು ನನ್ನ ಹಿಂದಿನ ಜನ್ಮದ ಪುಣ್ಯ ಎಂದರು. ಬ್ಯಾಂಕ್ ಅಕೌಂಟ್ ಇಲ್ಲ, ಟ್ರಸ್ಟ್ ಇಲ್ಲ. ಬಂದ ಕಾಣಿಕೆಯನ್ನು ಭಕ್ತರಿಗೆ ಕೊಡುತ್ತಿರುವ ಈ ಮಠದ ಕಾರ್ಯ ಅಚ್ಚರಿ ಹಾಗೂ ಆಶ್ಚರ್ಯ ತಂದಿದೆ. ಈ ಕ್ಷೇತ್ರದ ಮಹಿಮೆ ಅಪಾರವಾಗಿದ್ದು, ಇಲ್ಲಿಗೆ ನಾನು ಪ್ರಥಮ ಸಲ ಬಂದಿದ್ದೇನೆ. ಈ ಸ್ಥಳಕ್ಕೆ ಅನೇಕ ಸಾಧಕರು ಬಂದು ಹೋಗಿದ್ದು, ಇಲ್ಲಿಯ ಮಹಿಮೆ ಅಪಾರ ಎನ್ನುವುದು ಮನವರಿಕೆ ಆಗಿದೆ ಎಂದರು.