ಬಾಗಲಕೋಟೆ:ಘಟಪ್ರಭಾ ನದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರ ಕುಂದು ಕೊರತೆಗಳನ್ನು ಆಲಿಸಿದರು.
ಮುಧೋಳ ತಾಲೂಕಿನ ಮಿರ್ಜಿ ಹಾಗೂ ಒಂಟಗೋಡಿ ಗ್ರಾಮಗಳ ನೆರೆ ಪ್ರದೇಶಗಳಿಗೆ ಭೇಟಿ ನೀಡಿದ ಎಸ್. ಆರ್. ಪಾಟೀಲ್, ಸ್ಥಳೀಯರ ಸಮಸ್ಯೆ ಆಲಿಸಿದರು. ಇದೇ ಸಮಯದಲ್ಲಿ ಪ್ರವಾಹದಿಂದ ತೊಂದರೆಗೆ ಒಳಗಾಗಿರುವ ಸಂತ್ರಸ್ತರಿಗೆ ನಿರ್ಮಾಣ ಮಾಡಿರುವ ಕಾಳಜಿ ಕೇಂದ್ರ ಬಗ್ಗೆ ಮಾಹಿತಿ ಪಡೆದುಕೊಂಡು, ಸ್ಥಳೀಯ ಆಡಳಿತ ಎಲ್ಲಾ ಸೌಲಭ್ಯಗಳ ಕುರಿತು ವಿಚಾರಿಸಿದರು. ಈ ಸಮಯದಲ್ಲಿ ಕಾಳಜಿ ಕೇಂದ್ರದಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ ಎಂದು ಸಂತ್ರಸ್ತರು ತಮ್ಮ ಅಹವಾಲು ಹೇಳಿಕೊಂಡರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಧಾನ ಪರಿಷತ್ ವಿ.ಪ ನಾಯಕ ಭೇಟಿ, ಪರಿಶೀಲನೆ ಇದಕ್ಕೆ ಸ್ಪಂದಿಸಿದ ಎಸ್.ಆರ್.ಪಾಟೀಲ್ ಸಂಬಂದಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಕಾಳಜಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ, ಜನರು ಮೊದಲೇ ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದಾರೆ. ನೀವು ಏನು ಸೌಲಭ್ಯ ನೀಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಂತ್ರಸ್ತರಿಗೆ ಪೌಷ್ಟಿಕ ಆಹಾರ, ಶುದ್ಧ ಕುಡಿಯುವ ನೀರು ಜೊತೆಗೆ ಜಾನುವಾರುಗಳಿಗೆ ಮೇವು ಒದಗಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಅಧಿಕ ಮಳೆಯಾಗುತ್ತಿರುವ ಕಾರಣ ತೊಂದರೆ ಉಂಟಾಗಿದೆ. ಮುಖ್ಯಮಂತ್ರಿ ಬದಲಾವಣೆಯಲ್ಲಿ ಬಿಜೆಪಿ ಸರ್ಕಾರ ಗೊಂದಲಮಯವಾಗಿದೆ. ಇಲ್ಲಿ ಪ್ರವಾಹದಿಂದ ಜನತೆ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳು ಹೆಚ್ಚು ಕಾರ್ಯೋನ್ಮುಖವಾಗಬೇಕಾಗಿದೆ ಎಂದು ತಿಳಿಸಿದರು.
ಸ್ಥಳೀಯ ಮುಖಂಡರಾದ ಸತೀಶ್ ಬಂಡಿವಡ್ಡರ ನಂದುಕುಮಾರ ಪಾಟೀಲ ಸೇರಿದಂತೆ ಇತರ ಮುಖಂಡರೊಂದಿಗೆ ಮುಧೋಳ ತಾಲೂಕಿನಲ್ಲಿ ಪ್ರವಾಹ ಉಂಟಾಗಿ,ತೊಂದರೆ ಒಳಗಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.