ಬಾಗಲಕೋಟೆ: ಕಿವಿ, ಮೂಗು, ಕಣ್ಣು, ಚರ್ಮ ಹಾಗು ನಾಲಿಗೆ ಇಲ್ಲದ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಬಾಗಲಕೋಟೆಗೆ ಭೇಟಿ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಪಾಟೀಲ್, ಈ ಸರ್ಕಾರಕ್ಕೆ ಪಂಚೇಂದ್ರಿಯಗಳೇ ಇಲ್ಲ. ನೆರೆ ಸಂತ್ರಸ್ತರಿಗೆ 5 ಲಕ್ಷ ರೂ ಬದಲಾಗಿ 10 ಲಕ್ಷ ರೂಪಾಯಿ ಕೊಡುವಂತೆ ಒತ್ತಾಯಿಸಿದ್ದೇನೆ. ಈ ಹಿಂದೆ ಕೊಡಗಿನಲ್ಲಿ 10 ಲಕ್ಷ ರೂ ಪರಿಹಾರ ನೀಡಲಾಗಿದೆ. ನಮ್ಮ ಸರ್ಕಾರವೇ ನೀಡಿದೆ. ಈಗಲೂ ಎಲ್ಲಾ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಲಿ ಎಂದು ಆಗ್ರಹಿಸಿದ್ರು.
ರಾಜ್ಯ ಸರ್ಕಾರದ ವಿರುದ್ಧ ಎಸ್.ಆರ್. ಪಾಟೀಲ್ ವಾಗ್ದಾಳಿ ಕೃಷ್ಣಾ ಮೇಲ್ದಂಡೆ ಯೋಜನೆ ಮಾದರಿಯಲ್ಲಿ ಪರಿಹಾರ ನೀಡಲು ಒತ್ತಾಯಿಸಿದ್ದೇನೆ. ಆದ್ರೆ ಇದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಲ್ಲದೇ ಕೇಂದ್ರ ಕೂಡ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಿಲ್ಲ. ಕಬ್ಬು, ರೇಷ್ಮೆ, ತೋಟಗಾರಿಕಾ ಬೆಳೆಗಳಿಗೆ ಎಷ್ಟು ಹಾನಿಯಾಗಿದೆಯೋ ಅಷ್ಟು ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದೇನೆ. ಇದಕ್ಕೂ ಸಹ ಸರ್ಕಾರ ಒಪ್ಪಲಿಲ್ಲಾ ಎಂದರು.
ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಕೆಲಸ ಪ್ರಧಾನಿ ಮೋದಿ ಅವರಿಂದ ನಡೆಯುತ್ತಿದೆ. ಈ ದೇಶದ ಸಮರ್ಥ ಮುಖಂಡರ ಮನೆಮೇಲೆ ದಾಳಿ ನಡೆಯುತ್ತಿದೆ. ಅದರಲ್ಲೂ ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ನಡೆಯುತ್ತಿವೆ. ಕಾಂಗ್ರೆಸ್ ನವರು ಇದಕ್ಕೆ ಜಗ್ಗುವುದಿಲ್ಲ ಎಂದು ಹೇಳಿದರು.
ವಿಧಾನಸಭೆಯಲ್ಲಿ ಮಾಧ್ಯಮಗಳನ್ನು ಹೊರಗಿಟ್ಟಿದ್ದು ಸರಿಯಲ್ಲ. ಮಾಧ್ಯಮ ಸ್ವಾತಂತ್ರ್ಯದ ಹಕ್ಕನ್ನು ಮೊಟಕು ಮಾಡುವ ಕೆಲಸ ಸರಿಯಿಲ್ಲ. ವಿಧಾನಪರಿಷತ್ತಿನಲ್ಲಿ ನಮ್ಮ ಸಭಾಪತಿಗಳು ಎಲ್ಲಾ ಮಾಧ್ಯಮದವರಿಗೆ ಅವಕಾಶ ಕಲ್ಪಿಸಿದ್ದಾರೆ. ಜನರಿಂದ ಆಯ್ಕೆಯಾದ ನಾವು ಜನರ ಒಳಿತಿಗಾಗಿ ಹೇಗೆ ಕೆಲಸ ಮಾಡ್ತೇವೆ ಅನ್ನೋದನ್ನು ಜನ ಗಮನಿಸುತ್ತಾರೆ. ಮಾಧ್ಯಮಗಳ ಕಣ್ಣಿಗೆ ಬಟ್ಟೆ ಕಟ್ಟಿ ಮಾಧ್ಯಮಗಳನ್ನು ಹೊರಗಿಡುವುದು ಸರಿಯಲ್ಲಾ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.