ಬಾಗಲಕೋಟೆ:ಬಾದಾಮಿ ತಾಲೂಕಿನ ಮಲಪ್ರಭಾ ನದಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಸೇರಿದಂತೆ ಇತರ ಮುಖಂಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಷೇತ್ರದಲ್ಲಿ ಪ್ರವಾಸ ಹಮ್ಮಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಯುವ ಧುರೀಣರು ಪ್ರವಾಹ ಪೀಡಿತ ಪ್ರದೇಶಗಳಾದ ಬಾದಾಮಿ ತಾಲೂಕಿನ ಗೋವಿನಕೊಪ್ಪ, ಕಿತ್ತಲಿ, ಮುಮ್ಮರೆಡ್ಡಿಕೊಪ್ಪ, ಕಳಸ, ಕಿತ್ತಲಿ ಪುನರ್ವಸತಿ, ಸುಳ್ಳ ಪುನರ್ವಸತಿ ಪ್ರದೇಶ, ಜಕ್ಕಾನೂರು ಆರ್.ಸಿ ತಮಿನಾಳ, ಕಾತರಕಿ, ಖ್ಯಾಡ, ಚೊಳಚಗುಡ್ಡ ಸೇತುವೆ ಸೇರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಮಲಪ್ರಭಾ ನದಿಗೆ ಹೆಚ್ಚುವರಿಯಾಗಿ ನೀರು ಬಿಡುಗಡೆ ಮಾಡಿರುವುದರಿಂದ ಗೋವಿನಕೊಪ್ಪ ಚಿಕ್ಕ ಸೇತುವೆ ಮುಳುಗಡೆಯಾದ ಸ್ಥಳಕ್ಕೂ ಭೇಟಿ ನೀಡಿ ಪ್ರತಿವರ್ಷ ನೆರೆ ಹಾವಳಿಗೆ ಜನರು ತುತ್ತಾಗುತ್ತಾರೆ. ಪ್ರತಿ ವರ್ಷ ಇದೇ ಸಮಸ್ಯೆ ಗ್ರಾಮಸ್ಥರು ಎದುರಿಸುತ್ತಿದ್ದು, ಜನರನ್ನು ಶಾಶ್ವತವಾಗಿ ಇಲ್ಲಿಂದ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರ ಒಕ್ಕೊರಿನ ಬೇಡಿಕೆಯಾಗಿದೆ.
ಈ ವಿಷಯವನ್ನು ನಾನು ಸಹ ಸದನದಲ್ಲಿ ಚರ್ಚೆ ಮಾಡಿದ್ದೇನೆ. ಆದರೂ ಏನು ಪ್ರಯೋಜನವಾಗಿಲ್ಲ. ಇಲ್ಲಿಯವರೆಗೆ ಒಂದು ಗ್ರಾಮ ಸಹ ಸ್ಥಳಾಂತರ ಆಗಿಲ್ಲ. ಮಲಪ್ರಭ ನದಿಗೆ ಆಣೆಕಟ್ಟಿನಿಂದ ಕೂಡಲಸಂಗಮದ ವರೆಗೂ ಒತ್ತುವರಿಯಾಗಿದ್ದು, ಒತ್ತುವರಿ ಸರ್ವೇ ನಡೆಯುತ್ತಿದೆ. ಒತ್ತುವರಿ ತೆರುವಾದರೆ ಇಷ್ಟೊಂದು ಅನಾಹುತ ಆಗಲಿಕ್ಕಿಲ್ಲ. ಈ ಭಾಗದಲ್ಲಿ ಸಾಕಷ್ಟು ಬೆಳೆ ನಾಶವಾಗಿದೆ. ಕಬ್ಬು, ಈರುಳ್ಳಿ, ಗೋವಿನಜೋಳ ಮತ್ತು ತೋಟಗಾರಿಕಾ ಬೆಳೆಗಳಾದ ಚಿಕ್ಕು, ದಾಳಿಂಬೆ ಸೇರಿದಂತೆ ಬಹಳಷ್ಟು ಬೆಳೆ ನಾಶವಾಗಿದೆ. ಸರ್ಕಾರ ಆದಷ್ಟು ಬೇಗ ಇಲ್ಲಿನ ಜನರನ್ನು ಸ್ಥಳಾಂತರ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು ಎಂದು ಎಸ್.ಆರ್. ಪಾಟೀಲ್ ತಿಳಿಸಿದರು.
ಈ ವೇಳೆ ಹೊಳೆಬಸು ಶೆಟ್ಟರ್ ಮಹೇಶ್ ಹೊಸಗೌಡರ್, ಚಲವಾದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ .ಎಂ.ಡಿ ಎಲಿಗಾರ, ಬಾದಾಮಿ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಶ್ರೀಮತಿ ಶೈಲಾಜಾ ಪಾಟೀಲ್, ರೇವಣಸಿದ್ದಪ್ಪ ನೋಟಗಾರ, ಮಹಾಂತೇಶ ಹಟ್ಟಿ, ರಂಗಣ್ಣ ಪಿ. ಗೌಡರ್ ಹಾಗೂ ಬಾದಾಮಿ ತಾಲೂಕಿನ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಹಾಗೂ ಬಾದಾಮಿ ತಾಲೂಕು ತಹಶೀಲ್ದಾರ್ ಇಂಗಳೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ, ತಾಲೂಕು ಪೊಲೀಸ್ ಇಲಾಖೆ ಹಾಗೂ ತಾಲೂಕಿನ ಬಾದಾಮಿ ತಾಲೂಕಿನ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.