ಬಾಗಲಕೋಟೆ : ಜೂನ್ 13 ರಂದು ನಡೆಯಲಿರುವ ವಾಯುವ್ಯ ಶಿಕ್ಷಕರ ಹಾಗೂ ಪದವೀಧರ ಚುನಾವಣೆ ಹಿನ್ನೆಲೆ, ಬಾಗಲಕೋಟೆ ನಗರದಲ್ಲಿ ಬಿಜೆಪಿ ನಾಯಕರು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ದೇವರಿಗೆ ಹೋಮ ಹವನ ಸಹಿತ ವಿಶೇಷ ಪೂಜೆ ಪುನಸ್ಕಾರ ಮಾಡಿ, ಅಭ್ಯರ್ಥಿಗಳಿಗೆ ಗೆಲುವು ಸಿಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಭ್ಯರ್ಥಿಗಳ ಗೆಲುವಿಗಾಗಿ ಬಿಜೆಪಿಯಿಂದ ವಿಶೇಷ ಪೂಜೆ ಜಿಲ್ಲೆಯ ಜಾಗೃತ ದೇವಾಲಯ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ದೇವರು ಎಂದು ಖ್ಯಾತಿ ಪಡೆದಿರುವ, ತುಳಸಿಗೇರಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು. ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ ನೇತೃತ್ವದಲ್ಲಿ ಪೂಜಾ ಕಾರ್ಯ ಜರುಗಿತು. ಇಂದು ಶನಿವಾರ ಹಿನ್ನೆಲೆ ಆಂಜನೇಯ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರೆ, ಸಕಲ ಸಂಕಷ್ಟ ದೂರ ಮಾಡಿ, ಇಷ್ಟಾರ್ಥಗಳು ಸಿದ್ಧಿ ಆಗಲಿವೆ ಎಂಬ ನಂಬಿಕೆಯಿಂದ ಬೆಳಗಿನ ಜಾವ ದೇವಾಲಯ ಆವರಣದಲ್ಲಿ ಹೋಮ ಹವನ, ಪೂಜೆ ನಡೆಸಲಾಗಿದೆ.
ವಾಯುವ್ಯ ಪಧವೀಧರ ಮತಕ್ಷೇತ್ರದ ಹನಮಂತ ನಿರಾಣಿ ಮತ್ತು ಶಿಕ್ಷಕರ ಮತಕ್ಷೇತ್ರದ ಅರುಣ ಶಹಾಪೂರ ಗೆಲುವಿಗಾಗಿ ಪೂಜೆ ಸಲ್ಲಿಸಲಾಗಿದ್ದು, ದೇವರಿಗೆ ಹೋವು, ಹಣ್ಣುಗಳಿಂದ ವಿಶೇಷವಾಗಿ ಅಲಂಕಾರ ಮಾಡಿ, ವಿಜಯದ ಹೋಮ ನೆರವೇರಿಸಲಾಯಿತು. ಬಿಜೆಪಿ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನ ಚರಂತಿಮಠ ಅವರು ಪೂಜೆಗೆ ಕುಳಿತಿದ್ದರು. ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿ, ಬಿಜೆಪಿ ಅಭ್ಯರ್ಥಿಗಳಿಗೆ ಗೆಲವು ಸಿಗುವಂತೆ ಮಾಡಲಿ ಎಂದು ಪ್ರಾರ್ಥನೆ ಸಲ್ಲಿಸಿದರು.
ಬಾಗಲಕೋಟೆ ಶಾಸಕರಾಗಿರುವ ವೀರಣ್ಣ ಚರಂತಿಮಠ ಹಾಗೂ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಅವರ ನಡುವೆ ಭಿನ್ನಾಭಿಪ್ರಾಯ ಇದೆ. ಆದರೆ ಮಲ್ಲಿಕಾರ್ಜುನ ಚರಂತಿಮಠ ಸಚಿವ ಮುರುಗೇಶ ನಿರಾಣಿ ಪರವಾಗಿರುವುದು ಶಾಸಕ ಚರಂತಿಮಠ ಅವರಿಗೆ ಇರಿಸು ಮುರುಸು ಉಂಟು ಮಾಡುತ್ತಿದೆ. ಇದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಓದಿ :ನಡುರಸ್ತೆಯಲ್ಲೇ ನೂಪುರ್ ಶರ್ಮಾ ಅಣಕು ಪ್ರತಿಕೃತಿ ನೇಣಿಗೆ; ಸುಮೋಟೋ ಕೇಸ್ ದಾಖಲಿಸಿಕೊಂಡ ಬೆಳಗಾವಿ ಪೊಲೀಸರು