ಬಾಗಲಕೋಟೆ: ಕೆಲ ದೇವಿ ಜಾತ್ರೆಗಳಲ್ಲಿ ಪ್ರಾಣಿ ಬಲಿ, ಮದ್ಯ ಸೇವನೆಯಂತಹ ಅನಾಚಾರಗಳು ಕಂಡುಬರುತ್ತವೆ. ಆದ್ರೆ, ಈ ಊರಿನಲ್ಲಿ ನಡೆಯುವ ದೇವಿ ಜಾತ್ರೆ ತುಂಬ ವಿಶಿಷ್ಟತೆಯಿಂದ ಕೂಡಿದೆ.
ಬಾದಾಮಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿಯ ಜಾತ್ರೆ ಈ ಬಾರಿ ವಿಶೇಷವಾಗಿ ಎಲ್ಲರ ಗಮನ ಸೆಳೆದಿದೆ. ಪ್ರಾಣಿ ಬಲಿಯಂತಹ ಪದ್ಧತಿ ಇಲ್ಲದಿರುವುದು ಜಾತ್ರೆಯ ವಿಶೇಷತೆ. ಹೋಳಿಗೆ ಹಾಗೂ ಮಾವಿನಹಣ್ಣಿನ ಶೀಕರಣೆ ಊರಿನ ತುಂಬೆಲ್ಲ ಘಮ ಘಮಿಸುತ್ತದೆ. ಐದು ಕ್ವಿಂಟಾಲ್ ಬೇಳೆಯಿಂದ ಹೋಳಿಗೆ ಹಾಗೂ ಐದು ಕ್ವಿಂಟಾಲ್ ಮಾವಿನ ಹಣ್ಣಿನಿಂದ ಶೀಕರಣೆ ಮಾಡಿ ಬರುವ ಸಾವಿರಾರು ಭಕ್ತರಿಗೆ ಪ್ರಸಾದ ವಿತರಿಸಲಾಗುತ್ತದೆ.
ಇನ್ನು ಜಾತ್ರೆಯ ಸಮಯದಲ್ಲಿ ದೇವಿ ಗರ್ಭ ಗುಡಿಯಲ್ಲಿ ಕುಳಿತುಕೊಳ್ಳದೆ, ಇಡೀ ಊರಿನಾದ್ಯಂತ ಸಂಚರಿಸುತ್ತಾಳೆ. ಭಕ್ತರ ಮನೆ ಮನೆಗೆ ಹೋಗಿ ಉಡಿ ತುಂಬಿಸಿಕೊಳ್ಳುತ್ತಾಳೆ. ದೇವಿಯನ್ನು ಹೊತ್ತುಕೊಂಡು ಬರುವ ನಾಲ್ವರ ಮೇಲೆ ದೇವಿಯು ಅವತಾರ ತಾಳಿ ತಾನು ಎಲ್ಲಿಗೆ ಹೋಗಬೇಕು, ಯಾವ ಭಕ್ತರ ಮನೆಗೆ ಹೋಗಿ ಉಡಿ ತುಂಬಿಸಿಕೊಳ್ಳಬೇಕು ಅನ್ನಿಸುತ್ತದೆಯೋ ಅಲ್ಲಿಗೆ ಹೋಗಿ ಪೂಜೆ ಮಾಡಿಸಿಕೊಳ್ಳುತ್ತಾಳೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ.
ಇನ್ನು ಈ ದ್ಯಾಮವ್ವ ದೇವಿಗೆ ಹೂವಿನ ಹಾರದ ಜೊತೆ ಗರಿ ಗರಿ ನೋಟಿನ ಕಂತೆಗಳ ಹಾರವನ್ನೂ ಹಾಕಲಾಗುತ್ತದೆ. ಫಲ-ಪುಷ್ಪ ಸೇರಿದಂತೆ ಇತರ ಸಾಮಗ್ರಿಗಳನ್ನು ಭಕ್ತರು ನೀಡಿ, ತಮ್ಮ ಹರಕೆ ತೀರಿಸುತ್ತಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವ ದೇವಿಯ ಜಾತ್ರೆ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿರುತ್ತದೆ.