ಬಾಗಲಕೋಟೆ: ಬುಧವಾರ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಎರಡು ಗುಂಪಿನ ಯುವಕರ ಮಧ್ಯೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇ ದ್ವೇಷ ಹಾಗು ಯುವತಿಯರನ್ನ ಚೂಡಾಯಿಸಿದ್ದೇ ಮೂಲ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯ ಪ್ರಕಾಶ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆರೂರ ಗಲಾಟೆಗೆ ಸಂಬಂಧಿಸಿದಂತೆ 4 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಈ ಕುರಿತು ಎರಡೂ ಗುಂಪಿನ 18 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ನಿನ್ನೆ ಎರಡು ಕೋಮಿನ ಯುವಕರ ಮಧ್ಯೆ ಗಲಾಟೆಯಾಗಿ ನಾಲ್ವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಲಾಟೆಯಲ್ಲಿ ಒಂದು ಗುಂಪಿನ 3 ಜನ, ಮತ್ತೊಂದು ಗುಂಪಿನ ಓರ್ವನಿಗೆ ಗಾಯವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಳೆ ರಾತ್ರಿ 8 ಗಂಟೆವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಜನರು ಅನಾವಶ್ಯಕವಾಗಿ ಕಾನೂನು ಕೈಗೆತ್ತಿಕೊಳ್ಳಬಾರದು ಹಾಗೂ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಎಸ್ ಪಿ ಮನವಿ ಮಾಡಿದ್ದಾರೆ.