ಕರ್ನಾಟಕ

karnataka

ಐತಿಹಾಸಿಕ ತಾಣಗಳ ಬಳಿಯಿರುವ ಮನೆಗಳ ಸ್ಥಳಾಂತರಕ್ಕೆ ಶೀಘ್ರವೇ ಚಾಲನೆ : ಡಿಸಿ ಡಾ. ರಾಜೇಂದ್ರ

By

Published : Mar 12, 2020, 5:02 AM IST

ಬಾದಾಮಿ ಗುಹೆಯ ಹತ್ತಿರವಿರುವ ಮನೆಗಳ ಕಟ್ಟಡಗಳ ಮೌಲ್ಯಮಾಪನ ಕಾರ್ಯವನ್ನು 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಬಾದಾಮಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಡಿಸಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ಸೂಚಿಸಿದರು.

soon-the-relocation-of-homes-in-historic-sites-dc-rajendra
ಎಕಗವಾಕ್ಷಿ ಸಮಿತಿ ಸಭೆ

ಬಾಗಲಕೋಟೆ: ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆ ಪ್ರವಾಸಿ ತಾಣಗಳ ಸ್ಮಾರಕಗಳಿಗೆ ಹತ್ತಿರವಿರುವ ಮನೆಗಳನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಅದಕ್ಕೆ ಶೀಘ್ರವೇ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ. ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿಂದು ವಿವಿಧ ಐತಿಹಾಸಿಕ ತಾಣಗಳಲ್ಲಿನ ಸ್ಮಾರಕಗಳ ಸಂರಕ್ಷಣೆ ಕುರಿತ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನೆಯ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾದಾಮಿ ಗುಹೆಯ ಹತ್ತಿರವಿರುವ ಕಟ್ಟಡಗಳ ಮೌಲ್ಯಮಾಪನ ಕಾರ್ಯವನ್ನು 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಬಾದಾಮಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ 40 ಮನೆಗಳ ಸ್ಥಳಾಂತರಕ್ಕೆ ಸ್ಥಳೀಯರು ಒಪ್ಪಿಗೆ ನೀಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಕ್ಕರೆ ಕಾರ್ಖಾನೆ ಹತ್ತಿರ ಜಮೀನು ಖರೀದಿಸಲು ನಿರ್ಧರಿಸಲಾಗಿದ್ದು, ಉಪವಿಭಾಗಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸೂಚಿಸಿದರು. ಬಾದಾಮಿಯಲ್ಲಿ ಪಾರ್ಕಿಂಗ್ ಪ್ಲಾಜಾ ನಿರ್ಮಾಣಕ್ಕೆ ಎಪಿಎಂಸಿ ವ್ಯಾಪ್ತಿಯ 17 ಎಕರೆ ಜಮೀನು ಲಭ್ಯವಿದ್ದು, ಈ ಬಗ್ಗೆ ಪ್ರವಾಸೋದ್ಯಮ ಸಚಿವರಿಗೆ ತಕ್ಷಣವೇ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.

ಬಾದಾಮಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 5 ಕೋಟಿ ರೂ.ಗಳ ಅನುದಾನ ನೀಡಿದ್ದು, ತಕ್ಷಣವೇ ಡಿಪಿಆರ್ ತಯಾರಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು. ಪಟ್ಟದಕಲ್ಲು ಗ್ರಾಮದಲ್ಲಿರುವ ಐತಿಹಾಸಿಕ ಸ್ಮಾರಕಗಳ ಸುತ್ತಮುತ್ತಲಿನ 920 ಮನೆಗಳನ್ನು ಸ್ಥಳಾಂತರಿಸಲು 115 ಎಕರೆ ಜಮೀನನ್ನು ಗುರುತಿಸಲಾಗಿದ್ದು, ಮನೆಗಳ ಮಾಲೀಕರು ಹಾಗೂ ಜಮೀನು ಮಾಲೀಕರ ಸಮಾಲೋಚನಾ ಸಭೆಯನ್ನು ಮಾರ್ಚ್​ 27ರಂದು ನಡೆಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದರು.

ಐಹೊಳೆ ಪ್ರವಾಸಿ ತಾಣಗಳಲ್ಲಿರುವ ಮನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸಲು 137 ಎಕರೆ ಜಮೀನನ್ನು ಗುರುತಿಸಿ ಖರೀದಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ಹಾಗೂ ಅನುದಾನ ಬಂದ ನಂತರ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ABOUT THE AUTHOR

...view details