ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆಯುಳ್ಳ ಚಾಲುಕ್ಯರು ಆಳಿದ ನಾಡು ಬಾದಾಮಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ರಂಗೇರಿದೆ. ಹಿಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಬಿ ಶ್ರೀ ರಾಮುಲು ಸ್ಪರ್ಧೆಯಿಂದ ಬಾದಾಮಿ ಹೈವೋಲ್ಟೆಜ್ ಕ್ಷೇತ್ರವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ತಂದೆ ಮತ್ತು ಬಿಜೆಪಿ ಅಭ್ಯರ್ಥಿಯ ಪರವಾಗಿ ಮಗ ಪ್ರಚಾರ ಕಾರ್ಯದಲ್ಲಿ ತೊಡಗಿರುವುದರಿಂದ ಬಾದಾಮಿ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಷೇತ್ರ ತ್ಯಾಗ ಮಾಡಿದ್ದ ಮಾಜಿ ಸಚಿವ ಬಿ ಬಿ ಚಿಮ್ಮನಕಟ್ಟಿ ಅವರಿಗೆ ಈ ಬಾರಿ ಸಿದ್ದರಾಮಯ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಆದರೆ ಬಿ ಬಿ ಚಿಮ್ಮನಕಟ್ಟಿ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಅವರ ಬದಲಾಗಿ ಪುತ್ರ ಭೀಮಸೇನ ಚಿಮ್ಮನಕಟ್ಟಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಈ ಬಾರಿ ಹೇಗಾದರೂ ಮಾಡಿ ಪುತ್ರನನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸುವ ಮೂಲಕ ಮತ್ತೆ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ತಮ್ಮ ಅನಾರೋಗ್ಯದ ನಡುವೆಯೂ ಪುತ್ರನ ಗೆಲುವಿನಗಾಗಿ ಚಿಮ್ಮನಕಟ್ಟಿ ಹಗಲಿರುಳು ಶ್ರಮಿಸುತ್ತಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಬಂಡಾಯ ಎದಿದ್ದ ಆಪ್ತರಿಗೆ ಸಿದ್ದರಾಮಯ್ಯ ಸಮಾಧಾನಪಡಿಸಿ, ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಬಾದಾಮಿ ಕ್ಷೇತ್ರದಲ್ಲಿ ಕುರುಬ ಸಮುದಾಯದ ಪ್ರಾಬಲ್ಯ ಹೆಚ್ಚಾಗಿದೆ. ಮಾಜಿ ಸಚಿವರಾದ ಬಿ ಬಿ ಚಿಮ್ಮನಕಟ್ಟಿ ಅಖಾಡಕ್ಕಿಳಿದು ಪ್ರಚಾರ ಮಾಡಿದರೆ ಮಾತ್ರ ಮಗನ ಗೆಲುವಿಗೆ ದಾರಿ ಸುಗಮವಾಗಲಿದೆ ಎಂದು ಪ್ರತಿ ನಿತ್ಯ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.