ಬಾಗಲಕೋಟೆ:ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿಗೆ ಕೇಂದ್ರ ಸರ್ಕಾರದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಸಹಿತ ಬಹುಮಾನ ದೂರಕಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿ ಎಂದು ಪ್ರಾಚಾರ್ಯರಾದ ಎಸ್ ಎಸ್ ಇಂಜಗನೇರಿ ತಿಳಿಸಿದ್ದಾರೆ.
ಎಂಬಿಎ ಕಾಲೇಜ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾಹಿತಿ ನೀಡುತ್ತಾ, ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಎಐಸಿಟಿಇ ನವದೆಹಲಿ ವತಿಯಿಂದ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2020ನೇ ಸಾಲಿನ ಆಯುಷ್ ವಿಭಾಗದಲ್ಲಿ ಬಸವೇಶ್ವರ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ಒಂದು ಲಕ್ಷ ರೂಪಾಯಿಗಳ ಬಹುಮಾನ ಪಡೆದುಕೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ವರ್ಚುವಲ್ ಸಭೆಯ ಮೂಲಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವರಾದ ರಮೇಶ ಪೋಕ್ರಿಯಲ್ ಮತ್ತು ರಾಜ್ಯ ಸಚಿವರಾದ ಸಂಜಯ ಶ್ಯಾಮರಾವ್ ದೋತ್ರೆ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಬಹುಮಾನ ವಿತರಣೆ ಮಾಡಿದ್ದಾರೆ. ಖಾಸಗಿ ಸಂಸ್ಥೆಗಳು ಮತ್ತು ಉದ್ಯಮಗಳು ಎದುರಿಸುತ್ತಿರುವ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ.
ದೇಶದ ಪ್ರತಿಷ್ಠಿತ ಐಐಟಿ ಎನ್ಆಯ್‌ಟಿ ಮತ್ತು ಇಂಜಿನಿಯರಿಂಗ್ ಕಾಲೇಜ್‌ಗಳ ವಿದ್ಯಾರ್ಥಿಗಳು ಒಂದು ತಂಡವನ್ನು ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್‌ನ ಆರು ವಿದ್ಯಾರ್ಥಿಗಳು ಸೇರಿ ವಿ. ಆ್ಯಸಲ್ ಪಿಯಸ್ ಎಂಬ ಹೆಸರನ್ನು ಇಟ್ಟುಕೊಂಡು ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಪ್ರಾಚಾರ್ಯರು ತಿಳಿಸಿದರು.
ಹೊರ ರೋಗಿಗಳ ನೊಂದಣಿ ಮತ್ತು ಆಸ್ಪತ್ರೆ ನಿರ್ವಹಣೆ ಕುರಿತಾದ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ವಿಷಯದಲ್ಲಿ ಒಂದು ನೂತನ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ. ಆಯುಷ್ ಇಲಾಖೆಗೆ ಮಾತ್ರ ಸಿಮೀತವಾಗಿರುವ ಈ ಆ್ಯಪ್‌ನಿಂದ ವೈದ್ಯರ ಸೇವೆ, ರೋಗಿಗಳು ಎದುರಿಸುತ್ತಿರುವ ಸಮಸ್ಯೆ, ಪಾವತಿಸಬೇಕಾಗಿರುವ ಹಣ ಸೇರಿ ಎಲ್ಲದರ ಬಗ್ಗೆ ಮಾಹಿತಿ ನೀಡುವ ಆ್ಯಪ್ ಅಭಿವೃದ್ಧಿಪಡಿಸಿದ್ದಾರೆ. ಆದರೆ, ಇನ್ನೂ ಲಾಂಚ್ ಮಾಡಿಲ್ಲ, ಆಯುಷ್ ಇಲಾಖೆ ಮಾಹಿತಿ ನೀಡಿದ ನಂತರ ಚಾಲನೆ ದೂರಕಲಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಮಾತನಾಡಿದ ಪ್ರಾರ್ಚಾಯರು, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜ್ ರಾಷ್ಟ್ರಮಟ್ಟದಲ್ಲಿ ಶ್ರೇಷ್ಠ ಮಟ್ಟದ ಕಾರ್ಯಕ್ಷಮತೆಯಿಂದ ಹೆಸರು ಗಳಿಸಿದೆ. ಇದರಿಂದ ಕೇಂದ್ರ ಸರ್ಕಾರ ₹77 ಲಕ್ಷಕ್ಕೂ ಹೆಚ್ಚು ಅನುದಾನ ನೀಡಿದೆ. ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ಬೋಧನೆ ಮಾಡುವ ಆಡಿಯೋ, ವಿಡಿಯೋ ಸಹಿತ ತಿಳಿಸುವ ಉದ್ದೇಶದಿಂದ ಸುಸಜ್ಜಿತ ಕೊಠಡಿಗಳು ನಿರ್ಮಾಣ ಮಾಡಲಾಗಿದೆ ಎಂದು ಪ್ರಾಚಾರ್ಯರಾದ ಡಾ. ಎಸ್ ಎಸ್ ಇಂಜಗನೇರಿ ತಿಳಿಸಿದರು.