ಬಾಗಲಕೋಟೆ :ಆನ್‌ಲೈನ್ ಶಿಕ್ಷಣ ಪಡೆಯಲು ಸರ್ಕಾರದ ಸಹಾಯಕ್ಕಾಗಿ ಕಾಯ್ದು ಕುಳಿತಿರುವ ಜನರ ಮಧ್ಯೆ ಸಹೋದರಿಯರಿಬ್ಬರು ಸ್ವಾವಲಂಬಿಯಾಗಿ ದುಡಿದು ಸ್ಮಾರ್ಟ್‌ಫೋನ್ ಖರೀದಿಸುವ ಮೂಲಕ ಮಾದರಿಯಾಗಿದ್ದಾರೆ.
ಜಿಲ್ಲೆಯ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ಸವಿತಾ, ಮಹಾದೇವಿ ಕುರಿ ಎಂಬ ಸಹೋದರಿಯರು ಕೂಲಿ ಮಾಡಿ ಮೊಬೈಲ್ ಖರೀದಿಸಿ ಆನ್‌ಲೈನ್ ಶಿಕ್ಷಣ ಪಡೆದುಕೊಳ್ಳುತ್ತಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮುತ್ತಲಗೇರಿ ಗ್ರಾಮದ ಹನಮಂತ ಕುರಿ ಎಂಬುವರಿಗೆ ಏಳು ಜನ ಹೆಣ್ಣು ಮಕ್ಕಳಿದ್ದು, ಬಡತನದಲ್ಲಿಯೂ ಅವರನ್ನು ಶಿಕ್ಷಣದಿಂದ ದೂರ ಮಾಡಿಲ್ಲ ಎಂಬುವುದು ವಿಶೇಷ.
ಗ್ರಾಮದ ಆರ್ಎಂಎಸ್ ಸರ್ಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿ ಮತ್ತು 9ನೇ ತರಗತಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಸ್ವಾವಲಂಬಿಯಾಗಿ ಶಿಕ್ಷಣಕ್ಕೆ ಬೇಕಾದ ಪರಿಕರ ಖರೀದಿಸಿರುವುದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ.