ಬಾಗಲಕೋಟೆ:ಕೋವಿಡ್ ಹಿನ್ನೆಲೆಯಲ್ಲಿ ಶರಣ ಮೇಳವನ್ನು ಸರಳವಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಬಸವಧರ್ಮ ಪೀಠದ ಕಾರ್ಯಾಧ್ಯಕ್ಷೆ ಡಾ. ಮಾತೆ ಗಂಗಾದೇವಿ ತಿಳಿಸಿದ್ದಾರೆ.
ಬಸವಧರ್ಮ ಪೀಠದ ಕಾರ್ಯಾಧ್ಯಕ್ಷೆ ಡಾ. ಮಾತೆ ಗಂಗಾದೇವಿ ನವನಗರದ ಪ್ರೇಸ್ ಕ್ಲಬ್ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷ ಶರಣ ಮೇಳವು ಐದು ದಿನಗಳ ಕಾಲ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮೂರು ದಿನಗಳ ಕಾಲ ನಡೆಸಲಾಗುವುದು. ಜ. 12, 13 ಮತ್ತು 14ರಂದು ಮೇಳ ನಡೆಯಲಿದೆ. ಜ. 12ರಂದು ಲಿಂಗಾಯತ ಧರ್ಮ ಮಾನ್ಯತೆಗಾಗಿ ರೂಪುರೇಷ ನಡೆಯಲಿದ್ದು, ಹುಬ್ಬಳ್ಳಿ-ಧಾರವಾಡ ಶಾಸಕರಾದ ಅರವಿಂದ ಬೆಲ್ಲದ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಜ. 13ರಂದು ಶರಣ ಮೇಳಕ್ಕೆ ಚಾಲನೆ ದೊರೆಯಲಿದ್ದು, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಹಾಗೂ ಮಾಜಿ ಸಚಿವರಾದ ಎಂ.ಬಿ.ಪಾಟೀಲ ಹಾಗೂ ಸತೀಶ್ ಜಾರಕಿಹೊಳಿ, ಗುಂಡ್ಲುಪೇಟೆ ಶಾಸಕರಾದ ನಿರಂಜನ ಕುಮಾರ್ ಸೇರಿದಂತೆ ಇತರ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.
ಜ. 14ರಂದು ಸಮಾರೋಪ ಸಮಾರಂಭ ಜರುಗಲಿದ್ದು, ಬಸವಕ್ರಾಂತಿ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಧ್ವಜಾರೋಹಣ, ಸಮುದಾಯ ಪ್ರಾರ್ಥನೆ ಮತ್ತು ವಚನ ಪಠಣ ನಡೆಯುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ಸಮಾರಂಭ ನಡೆಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದಿಲ್ಲ. ಈ ಬಾರಿ ಸಂಕ್ರಾಂತಿ ಮೆರವಣಿಗೆ ನಿಷೇಧ ಮಾಡಲಾಗಿದೆ ಎಂದರು.