ಬಾಗಲಕೋಟೆ:ವೀರಶೈವ ಲಿಂಗಾಯತವನ್ನು ಒಡೆದಾಯ್ತು, ಈಗ ಸ್ವಾಮೀಜಿಗಳಲ್ಲಿ ಹಿರಿಯ ಸ್ವಾಮೀಜಿಗಳು, ಕಿರಿಯ ಸ್ವಾಮೀಜಿಗಳು ಎಂದು ಒಡೆಯುವ ಪ್ರಯತ್ನ ನಡೆಸುತ್ತಿದ್ದು, ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದು ವಿರುದ್ದ ಕಿಡಿ ಕಾರಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪ್ರಕಾರ ಹಿರಿಯ ಸ್ವಾಮೀಜಿಗಳೆಂದರೆ ಯಾರು? ಯಾವ ಮಾನದಂಡದ ಆಧಾರದಲ್ಲಿ ಅವರು ಸ್ವಾಮೀಜಿಗಳನ್ನು ಅಳೆಯುತ್ತಿದ್ದಾರೆ? ದಪ್ಪ, ಎತ್ತರ, ಹಣ ಜಾಸ್ತಿ ಇದ್ದವರು ಹಿರಿಯ ಸ್ವಾಮೀಜಿಗಳಾ? ಎಂದು ಪ್ರಶ್ನಿಸಿದರು. ಯಾರು ಸರ್ವವನ್ನೂ ತ್ಯಾಗ ಮಾಡಿ ಬಂದಿರ್ತಾರೋ ಅವರನ್ನು ಸ್ವಾಮೀಜಿಗಳು ಎನ್ನುತ್ತೇವೆ. ಆದರೆ ಸಿದ್ದಾರಾಮಯ್ಯ ಈ ಸಾಧು ಸಂತರನ್ನು ಒಡೆಯೋ ಪ್ರಯತ್ನ ಮಾಡುತ್ತಿದ್ದಾರೆ ಎಂದರು ಆರೋಪಿಸಿದರು.
ಹಿರಿಯ ಸ್ವಾಮೀಜಿ, ಕಿರಿಯ ಸ್ವಾಮೀಜಿ ಅಂತಾ ಒಡೆಯೋ ಪ್ರಯತ್ನ ಮಾಡಬೇಡಿ. ಹಿಂದೂ ಸಮಾಜ ಒಟ್ಟಾಗಿದೆ. ಲಿಂಗಾಯತರು, ವೀರಶೈವ ಅಂತಾ ಒಡೆದು ಒಂದು ಬಾರಿ ಅದರ ಕಹಿ ಅನುಭವಿಸಿ, ಕಾಂಗ್ರೆಸ್ ಸರ್ಕಾರವನ್ನೂ ಕಳೆದುಕೊಂಡಿದ್ದೀರಿ. ಚಾಮುಂಡೇಶ್ವರಿಯಲ್ಲಿ ಸೋತದ್ದೂ ಆಯ್ತು. ಆದರೂ ಇನ್ನೂ ನಿಮಗೆ ಬುದ್ಧಿ ಬಂದಿಲ್ಲವೇ ಎಂದು ಈಶ್ವರಪ್ಪ ಕುಹಕವಾಡಿದರು.
ಹಿರಿಯ ಸ್ವಾಮೀಜಿಗಳು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ವಿರೋಧ ಮಾಡಿಲ್ಲ ಅಂತಾರೆ, ಹಾಗಾದ್ರೆ ಇವರ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ಇಡೀ ದೇಶ ಹಾಗೂ ರಾಜ್ಯದಲ್ಲಿ ಯಾರಾದ್ರೂ ಒಬ್ಬ ಸ್ವಾಮೀಜಿ ಸಿದ್ದರಾಮಯ್ಯ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರಾ? ಅವರ ಕಾಂಗ್ರೆಸ್ ಪಕ್ಷದವರೇ (ಸಿದ್ದು) ಇವ್ರ ಹೇಳಿಕೆಯನ್ನ ಸ್ವಾಗತಿಸಿಲ್ಲ. ಅವರು ಹೇಳಿಕೆ ಕೊಟ್ಟಿದ್ದಾರೆ, ಅವರೇ ಉತ್ತರ ಕೊಟ್ಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ವಿಧಿಯಿಲ್ಲದೇ ಅವರ (ಸಿದ್ದರಾಮಯ್ಯ) ಮಗ ಯತೀಂದ್ರ ಮಾತ್ರ ಅವರ ಜೊತೆಗಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ನ ಒಬ್ಬ ನಾಯಕರು ಸಹ ಸಿದ್ದರಾಮಯ್ಯ ಪರ ಬಾಯಿಬಿಟ್ಟಿಲ್ಲ. ಇದನ್ನ ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು. ನೇರವಾಗಿ ನೀವು ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಹೋಗಿ ಸ್ಪರ್ಧಿಸಬೇಕು. ಮುಸ್ಲಿಂರ ಓಟು ನನಗೆ ಬೇಕು. ಅದ್ಕೋಸ್ಕರ ಅವರನ್ನು ತೃಪ್ತಿಪಡಿಸಲು ಈ ರೀತಿ ಹೇಳಿಕೆ ಕೊಡುತ್ತಿದ್ದೇನೆ. ನಾನು ಚಾಮರಾಜಪೇಟೆ ಚುನಾವಣೆಗೆ ನಿಲ್ಲಬೇಕು ಎಂದು ಹೇಳಿಕೊಂಡುಬಿಡಿ. ಅದು ಬಿಟ್ಟು ಹಿಂದೂ ಸಮಾಜದ ಬಗ್ಗೆ ಬಾಯಿಗೆ ಬಂದಂತೆ ಯಾಕೆ ಮಾತಾಡೋ ಪ್ರಯತ್ನ ಮಾಡ್ತೀರಿ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಕೋರ್ಟ್ ತೀರ್ಪನ್ನು ವಿರೋಧ ಮಾಡುವ ವ್ಯಕ್ತಿಗಳ ಜೊತೆಗೆ ನೀವು ಇದ್ದರೆ ಹೇಗೆ? ಕೋರ್ಟ್ ವಿರುದ್ಧ ಮಾತನಾಡೋಕೆ ನಿಮಗೆ ಯಾವುದೇ ಅಧಿಕಾರ ಇಲ್ಲ. ಸಂವಿಧಾನದ ಬಗ್ಗೆ ಮಾತನಾಡಲು ಅಂಬೇಡ್ಕರ್ ಬಿಟ್ರೆ ನಾನೇ ಇರುವುದು ಎನ್ನುವ ರೀತಿಯಲ್ಲಿ ಮಾಡ್ತಿದೀರಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ಹರಿಹಾಯ್ದರು.
ಇದನ್ನೂ ಓದಿ:ಸಿದ್ದರಾಮಯ್ಯರ ವಿವಾದಾತ್ಮಕ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕಾಂಗ್ರೆಸ್ ನಾಯಕರು!
ಹಿಜಾಬ್ ಕುರಿತ ಕೋರ್ಟ್ ತೀರ್ಪು ವಿರೋಧಿಸಿದ ವಿದ್ಯಾರ್ಥಿಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಮುಸಲ್ಮಾನ ವಿದ್ಯಾರ್ಥಿಗಳು ಶಿಕ್ಷಣವನ್ನೇ ಬಿಡುತ್ತೇವೆ, ಆದರೆ ಧರ್ಮವನ್ನು ಬಿಡುವುದಿಲ್ಲ ಅಂದಿದ್ದಾರೆ. ಆ ವಿದ್ಯಾರ್ಥಿಗಳು ಹಾಗೆ ಮಾತನಾಡಬಾರದು, ಶಿಕ್ಷಣ ಮುಖ್ಯ ಎಂದು ಒಂದು ಬುದ್ಧಿಮಾತಾದ್ರು ಸಿದ್ದರಾಮಯ್ಯನವರು ಹೇಳಬೇಕಾಗಿತ್ತಲ್ವ. ಯಾಕೆ ಬುದ್ಧಿ ಮಾತು ಹೇಳಿದರೆ ಮುಸ್ಲಿಂ ಓಟು ತಪ್ಪಿಹೋಗುತ್ತದೆ ಎಂಬ ಭಯವೇ? ಹೀಗೆ ಮಾಡಿಯೇ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗುತ್ತಾ ಹೋಗಿದೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಜೀವ ಸ್ವಲ್ಪ ಇದೆ. ಅದೂ ಕೂಡ ಯಾವಾಗ ಸಾಯುತ್ತದೆಯೋ ಗೊತ್ತಿಲ್ಲ. ಅದನ್ನು ನಿರ್ನಾಮ ಮಾಡಲು ಸಿದ್ದರಾಮಯ್ಯ ಒಬ್ಬರು ಸಾಕು ಎಂದು ಲೇವಡಿ ಮಾಡಿದರು.
ನ್ಯಾಯಾಲಯಕ್ಕೆ ಗೌರವ ಕೊಡುವುದನ್ನು ಕಲಿತುಕೊಳ್ಳಿ. ಸಾಧು ಸಂತರ ಬಗ್ಗೆ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅಕ್ಷಮ್ಯ ಅಪರಾಧ. ಜರಾಸಂಧನಿಗೆ ನೂರು ತಪ್ಪು ಮಾಡಿದಾಗ ಶಿಕ್ಷೆ ಆಯ್ತು ಅಂತಾರಲ್ಲ. ಹಾಗೆಯೇ ಸಿದ್ದರಾಮಯ್ಯ ಅವರದ್ದೂ ನೂರು ತಪ್ಪುಗಳಾಗಿವೆ. ಇನ್ಮುಂದೆ ಅವರು ಯಾವುದೇ ಕಾರಣಕ್ಕೂ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ. ಅವರು ರಾಜಕೀಯ ನಿವೃತ್ತಿ ಪಡೆಯಲಿ ಅಥವಾ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಶಕ್ತಿ ಇದ್ದರೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಳಿಸಲಿ. ಅದೂ ಸಾಧ್ಯವಾಗಲಿಲ್ಲವಾದರೆ ಕನಿಷ್ಠ ನಿಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಗಾದ್ರು ವಜಾ ಮಾಡಲು ಹೇಳಿ ಎಂದರು.