ಬಾಗಲಕೋಟೆ:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿ ಮತಕ್ಷೇತ್ರದಲ್ಲಿ ಎರಡನೇ ದಿನದ ಪ್ರವಾಸ ಹಮ್ಮಿಕೊಂಡಿದ್ದು, ಇಂದು ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 8 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಕಾಮಗಾರಿಯ ಅಡಿಗಲ್ಲು ನೇರವೇರಿಸಿದರು. ಈ ವೇಳೆ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಈ ಬಾರಿಯ ಪ್ರವಾಹದ ವಿಚಾರಕ್ಕಾದ್ರೂ ಪಿಎಂ ಮೋದಿ ಬರ್ತಾರಾ? ಎಂಬ ಪ್ರಶ್ನೆಗೆ ವ್ಯಂಗ್ಯವಾಡಿದ ಸಿದ್ದರಾಮಯ್ಯ, ಕರ್ನಾಟಕ ಅಂದ್ರೆ ಅವ್ರಿಗೆ ಒಂದು ರೀತಿಯ ಮಲತಾಯಿ ಧೋರಣೆ. ಹೋದ ವರ್ಷ ಉಂಟಾದ ಭೀಕರ ಪ್ರವಾಹದಲ್ಲಿಯೇ ಕರ್ನಾಟಕಕ್ಕೆ ಬರಲಿಲ್ಲ. ಅಂಥದ್ರಲ್ಲಿ ಈ ಸಾರಿ ಬರ್ತಾರಾ?, ಬರಲ್ಲ ಅವ್ರು, ಜನರೇ ಅವರಿಗೆ ಪಾಠ ಕಲಿಸ್ತಾರೆ ಎಂದರು.
ಇದೇ ಸಮಯದಲ್ಲಿ, ಯತ್ನಾಳ ಹಾಗೂ ಸಿಎಂ ನಡುವಿನ ತಿಕ್ಕಾಟದ ಬಗ್ಗೆ ಪ್ರತಿಕ್ರಿಯಿಸಿ, ನಾವಂತೂ ಸರ್ಕಾರ ಬೀಳಿಸೋಕೆ ಹೋಗಲ್ಲ. ಅವ್ರು ತಮ್ಮ ತಿಕ್ಕಾಟಗಳಿಂದ ಬೀಳಿಸಿಕೊಂಡ್ರೆ ಚುನಾವಣೆ ಎದುರಿಸೋಕೆ ತಯಾರಾಗಿದ್ದೇವೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದಕ್ಕೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದೆ ಎಂದರು.
ಬೈ ಎಲೆಕ್ಷನ್ ಬಗ್ಗೆ ಮಾತನಾಡುತ್ತಾ, ಶಿರಾ, ಆರ್ ಆರ್ ನಗರದಲ್ಲೂ ನಾವು ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಜಯಪುರಕ್ಕೆ ಬಂದಿದ್ದ 125 ಕೋಟಿ ರೂ ಅನುದಾನ ಯಡಿಯೂರಪ್ಪ ಕಟ್ ಮಾಡಿದ್ದಾರೆಂಬ ಯತ್ನಾಳ ಆರೋಪ ವಿಚಾರವಾಗಿ ಮಾತನಾಡಿ, ನಾವು ಸತ್ಯ ಹೇಳ್ತಿದ್ವಿ, ಈಗ ಅವ್ರಿಗೂ ಬಿಸಿ ಮುಟ್ಟಿದೆ ಅನ್ನೋ ಹಾಗೆ ಕಾಣ್ತಿದೆ. ಅವ್ರು ಸತ್ಯ ಹೇಳೋಕೆ ಶುರು ಮಾಡಿದ್ದಾರೆ ಎಂದರು.